ಮುಂಬೈ: ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದ ಬಾಲಿವುಡ್ ಚಿತ್ರ`ಮೆರ‍್ರಿ ಕ್ರಿಸ್‌ಮಸ್ʼ (Merry Christmas) ಕೊನೆಗೂ ತೆರೆಕಂಡಿದೆ. ಬಹುಭಾಷಾ ನಟ, ಕಾಲಿವುಡ್‌ನ ವಿಜಯ್ ಸೇತುಪತಿ ಮತ್ತು ಬಾಲಿವುಡ್‌ನ ಕತ್ರಿನಾ ಕೈಫ್ ಮೊದಲ ಬಾರಿ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವ ಈ ಚಿತ್ರ ಜನವರಿ 12ರಂದು ರಿಲೀಸ್ ಆಗಿದೆ. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ (Box Office) ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ.
ಮೊದಲ ದಿನದ ಗಳಿಕೆ ಎಷ್ಟು?
ಹಿಂದಿ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿರುವ ಈ ಥ್ರಿಲ್ಲರ್ ಚಿತ್ರ ಮೊದಲ ದಿನ ಭಾರತದಲ್ಲಿ ಕೇವಲ 2.55 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ ಎಂದು ವರದಿಯೊಂದು ತಿಳಿಸಿದೆ. ವೀಕೆಂಡ್‌ನಲ್ಲಿ ಗಳಿಕೆ ಹೆಚ್ಚಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ನಿರ್ದೇಶಕ ಶ್ರೀರಾಮ್ ರಾಘವನ್ ʻಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟಿಸಿದ್ದಾರೆ. ಕತ್ರಿನಾ ಕೈಫ್ ಮತ್ತು ಶ್ರೀರಾಮ್ ರಾಘವನ್ ಅವರ ಮೊದಲ ತಮಿಳು ಚಿತ್ರ ಇದು ಎನ್ನುವುದು ಕೂಡ ವಿಶೇಷ. ಹಿಂದಿ ಚಿತ್ರದಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್ ಕುಮಾರ್, ಷನ್ಮುಖರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ಈ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಧಿಕಾ ಆಮ್ಟೆ ಮತ್ತು ಅಶ್ವಿನಿ ಕಲ್ಶೇಖರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಈ ಹಿಂದೆ ʼಅಂಧಾಧುನ್ʼ, ʼಬದ್ಲಾಪುರ್ʼ ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಶ್ರೀರಾಮ್ ರಾಘವನ್ ಅವರ ʻಮೆರ‍್ರಿ ಕ್ರಿಸ್‌ಮಸ್ʼ ಬೆಟ್ಟದಷ್ಟು ನಿರೀಕ್ಷೆ ಹೊತ್ತು ತೆರೆಗೆ ಬಂದಿತ್ತು. ಆದರೆ ಮೊದಲ ದಿನ ನಿರಾಸೆ ಅನುಭವಿಸಿದೆ. ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಕೇಳಿ ಬಂದಿದೆ. 4 ಬಾರಿ ರಿಲೀಸ್ ದಿನಾಂಕವನ್ನು ಬದಲಾವಣೆ ಮಾಡಿಕೊಂಡ ʻಮೆರ‍್ರಿ ಕ್ರಿಸ್‌ಮಸ್ʼನಲ್ಲಿ ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅಭಿನಯವೇ ಹೈಲೈಟ್. ಕ್ಲೈ ಮ್ಯಾಕ್ಸ್ ಅದ್ಭುತ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Merry Christmas review: ಕ್ಲೈಮ್ಯಾಕ್ಸ್ ಟ್ವಿಸ್ಟ್ ಅದ್ಭುತ; `ಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾವನ್ನು ಹೊಗಳಿದ ಪ್ರೇಕ್ಷಕರು!
ಕಥೆ ಏನು?
ಕ್ರಿಸ್‌ಮಸ್‌ನ ಮುನ್ನಾ ದಿನದಂದು ಇಬ್ಬರು ಅಪರಿಚಿತರ ಮುಖಾಮುಖಿಯಾಗುವ ಘಟನೆ ಸುತ್ತ ಕಥೆ ಸಾಗುತ್ತದೆ. ಭಾವೋದ್ರಿಕ್ತ ಪ್ರಣಯದ ಸಂಜೆ ದುಃಸ್ವಪ್ನವಾಗಿ ಬದಲಾಗುವುದನ್ನು ನಿರ್ದೇಶಕ ಶ್ರೀರಾಮ್ ರಾಘವನ್ ಥ್ರಿಲ್ಲರ್ ಶೈಲಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ʼಜವಾನ್ʼ ಚಿತ್ರದ ಖಳ ನಾಯಕನ ಪಾತ್ರದಲ್ಲಿ ಮಿಂಚಿದ ವಿಜಯ್ ಸೇತುಪತಿ ಸದ್ಯ ಬ್ಯಾಕ್ ಟು ಬ್ಯಾಕ್ ಹಿಂದಿ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆಯೂರುವ ಲಕ್ಷಣ ತೋರುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಕತ್ರಿನಾ ಕೈಫ್ ಅಭಿನಯದ ʼಟೈಗರ್ 3ʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿರಲಿಲ್ಲ. ಹೀಗಾಗಿ ಅವರ ಗಮನವೆಲ್ಲ ಈಗ ʼಮೆರ‍್ರಿ ಕ್ರಿಸ್‌ಮಸ್ʼ ಸಿನಿಮಾ ಮೇಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ