ಹೈದರಾಬಾದ್: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ʼನಾಟು ನಾಟುʼ ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಿದೆ. ಅಲ್ಲದೆ, ಆಸ್ಕರ್‌ನ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದೆ. ಇದರ ಬೆನ್ನಲ್ಲೇ, “ನಾವು ಆಸ್ಕರ್ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ” ಎಂದು ಹಾಡಿನ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ (MM Keeravaani) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: RRR Movie | ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಅರ್ಜುನ್ ಸರ್ಜಾ ನೆನೆದ ಎಂ. ಎಂ. ಕೀರವಾಣಿ
ಈ ಬಗ್ಗೆ ಮಾತನಾಡಿರುವ ಕೀರವಾಣಿ ಅವರು, “ಕಳೆದ ಬಾರಿ ನಾನು ಭಾರತಕ್ಕೆ ಗೋಲ್ಡನ್ ಗ್ಲೋಬ್, ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ ಮತ್ತು ಕ್ರಿಟಿಕ್ಸ್ ಚಾಯ್ಸ್ ಮೂವಿ ಪ್ರಶಸ್ತಿಯನ್ನು ತೆಗೆದುಕೊಂಡು ಬಂದಿದ್ದೇನೆ. ಈ ಬಾರಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಗೆದ್ದು, ಅದನ್ನು ಹೆಮ್ಮೆಯಿಂದ ತೆಗೆದುಕೊಂಡು ಬರುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
“ಫೆಬ್ರವರಿ 10 ರಂದು ಅಮೆರಿಕದ ಲಾಸ್ ಏಂಜಲೀಸ್‌ಗೆ ಹೋಗುತ್ತಿದ್ದೇನೆ. ಫೆಬ್ರವರಿ 13 ರಂದು, ವೆರೈಟಿ ನಿಯತಕಾಲಿಕವು ಸಾಂಟಾ ಬಾರ್ಬರಾದ ಆರ್ಲಿಂಗ್ಟನ್ ಥಿಯೇಟರ್‌ನಲ್ಲಿ ನನ್ನನ್ನು ಗೌರವಿಸುತ್ತಿದೆ. ವೆರೈಟಿಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಜಗತ್ತಿನ ಅನೇಕ ಗಣ್ಯರಿಗೆ ಸನ್ಮಾನ ನಡೆಸಲಾಗುತ್ತಿದ್ದು, ಅದರಲ್ಲಿ ನನ್ನನ್ನೂ ಸೇರಿಸಿಕೊಂಡಿರುವುದು ನನ್ನ ಭಾಗ್ಯವಾಗಿದೆ” ಎಂದು ಕೀರವಾಣಿ ಅವರು ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಓದಿ: RRR Golden Globe Award | ʼಆರ್‌ಆರ್‌ಆರ್ʼಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಯದಲ್ಲಿ ಅಮೆರಿಕದಲ್ಲಿ ಕಾಲ ಕಳೆಯುವುದಕ್ಕೆ ಆಗಿರಲಿಲ್ಲ ಎಂದು ಹೇಳಿಕೊಂಡಿರುವ ಕೀರವಾಣಿ, ಈ ಬಾರಿ ಸ್ಯಾನ್ ಜೋಸ್‌ನಲ್ಲಿ ತನ್ನ ಸೋದರ ಸಂಬಂಧಿಯೊಂದಿಗೆ ಸಾಕಷ್ಟು ಸಮಯ ಕಳೆಯುವುದಾಗಿಯೂ ತಿಳಿಸಿದ್ದಾರೆ.