ಬೆಂಗಳೂರು: ಭಾರತಕ್ಕೆ ಇತ್ತೀಚೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿತ್ತು. ದಕ್ಷಿಣ ಭಾರತದ ಆರ್‌ಆರ್‌ಆರ್ ಸಿನಿಮಾದಲ್ಲಿ ಕೀರವಾಣಿ (MM Keeravani) ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಕೀರ್ತಿಯನ್ನು ತಂದುಕೊಟ್ಟ ಕೀರವಾಣಿ ಅವರಿಗೆ ಇಂದು (ಜು.4) 62ನೇ ವರ್ಷದ ಜನ್ಮದಿನ. ಪಿಟೀಲು ನುಡಿಸುವುದರಿಂದ ಆರಂಭವಾದ ಅವರ ಸಂಗೀತ ಪಯಣ ಆಸ್ಕರ್‌ವರೆಗೆ ಸಾಗಿ ಬಂದ ಹಾದಿ ರೋಚಕ.
ಕೊಡೂರಿ ಮರಕಥಾ ಮಣಿ ಕೀರವಾಣಿ ಅವರು ತಮ್ಮ 10ನೇ ವಯಸ್ಸಿನಲ್ಲಿ ಪ್ರಾಣಲಿಂಗಂ ಹೆಸರಿನ ಟ್ರಾವೆಲಿಂಗ್ ಬ್ಯಾಂಡ್‌ನಲ್ಲಿ ಪಿಟೀಲು ನುಡಿಸುವ ಕೆಲಸ ಮಾಡುತ್ತಿದ್ದರು. ಎಂಎಂ ಕ್ರೀಂ, ಮರತಗಮಣಿ ಎಂದೂ ಕರೆಸಿಕೊಳ್ಳುವ ಅವರು ಸಿನಿಮಾ ಕ್ಷೇತ್ರಕ್ಕೆ ಬರುವಾಗ ಸಿನಿಮಾ ಕ್ಷೇತ್ರ ಸಾಕಷ್ಟು ಲೆಜೆಂಡ್‌ಗಳನ್ನು ಆಗಲೇ ಕಂಡಿತ್ತು. ಕೆವಿ ಮಹದೇವನ್, ಕೆ ಚಕ್ರವರ್ತಿಯಂಥವರು ಅದಾಗಲೇ ದೊಡ್ಡ ಮಟ್ಟದ ಹೆಸರನ್ನು ಮಾಡಿ ತೆರೆಯ ಮರೆಗೆ ಸರಿಯಲಾರಂಭಿಸಿದ್ದರು. ಹಾಗೆಯೇ ಇಳಯರಾಜ ಅವರು ದೊಡ್ಡದೊಂದು ಹೆಸರು ಮಾಡಿಕೊಂಡು ಸಂಗೀತ ರಾಯಭಾರಿಯಂತಾಗಿದ್ದರು. ಆ ಸಮಯದಲ್ಲಿ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೀರವಾಣಿ ಅವರು ರಾಜ್-ಕೋಟಿ, ಮಣಿ ಶರ್ಮಾ, ವಿದ್ಯಾಸಾಗರ್, ಎಸ್ ಎ ರಾಜ್‌ಕುಮಾರ್ ಅವರಂತಹ ಖ್ಯಾತ ಸಂಗೀತಗಾರರ ಜೊತೆಗೆ ಕೆಲಸ ಮಾಡಿದರು.
ಇದನ್ನೂ ಓದಿ: Viral News : ಮಳೆಯಲ್ಲಿ ಜೊಮೆಟೊ ಡೆಲಿವರಿ ಏಜೆಂಟ್ ಡ್ಯಾನ್ಸ್! ಈ ಫೋಟೋ ಹಿಂದಿನ ರಹಸ್ಯ ಏನು?
ಕೀರವಾಣಿ ಅವರು 1987ರಲ್ಲಿ ಸಂಗೀತ ನಿರ್ದೇಶಕರಾದ ಕೆ ಚಕ್ರವರ್ತಿ ಮತ್ತು ಸಿ ರಾಜಮಣಿ ಅವರೊಂದಿಗೆ ಸಹಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ 1990ರಲ್ಲಿ ಬಿಡುಗಡೆಯಾದ ಕಲ್ಕಿ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿದರು. ಆದರೆ ಆ ಚಿತ್ರ ಬಿಡುಗಡೆಯಾಗಲಿಲ್ಲ. ನಂತರ ಅದೇ ವರ್ಷ ತೆಲುಗು ಭಾಷೆಯಲ್ಲಿ ಮನಸು ಮಮತಾ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದರು. ಅದು ಅವರ ಮೊದಲನೇ ಸಿನಿಮಾ ಎಂದು ಗುರುತಿಸಿಕೊಂಡಿತು.
ಹೀಗೆ ಆರಂಭವಾದ ಅವರ ಸಂಗೀತ ಪ್ರಯಾಣ ನಂತರದ ದಿನಗಳಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡುವಂತೆ ಮಾಡಿತು. ಒಟ್ಟು 190ಕ್ಕೂ ಅಧಿಕ ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Viral News : ಮಂಡ್ಯದಲ್ಲಿ ಬೈಕ್ ರೈಡಿಂಗ್ ವೇಳೆ ಎದ್ದುಬಂದ ಹಾವು; ಗಾಬರಿಯಾಗಿ ಜಿಗಿದೇ ಬಿಟ್ಟ ಸವಾರ
ಇಳಯರಾಜ, ಜಾನ್ ವಿಲಿಯಮ್ಸ್, ನುಸ್ರುತ್ ಫತೇಹ್ ಅಲಿ ಖಾನ್ ಮತ್ತು ಕಾರ್ಪೆಂಟರ್ ಅವರು ತಮ್ಮ ಸಂಗೀತ ಜೀವನದ ಮೇಲೆ ಪ್ರಮುಖ ಪ್ರಭಾವ ಬೀರಿದ್ದಾಗಿ ಕೀರವಾಣಿ ಅವರು ಹೇಳಿಕೊಂಡಿದ್ದಾರೆ. ಕೆ. ವಿಶ್ವನಾಥ್, ಬಾಪು, ಕೆ. ರಾಘವೇಂದ್ರ ರಾವ್, ಕ್ರಾಂತಿ ಕುಮಾರ್ ಮತ್ತು ರಾಮ್ ಗೋಪಾಲ್ ವರ್ಮಾ ಅವರಂತಹ ಪ್ರಖ್ಯಾತ ನಿರ್ದೇಶಕರೊಂದಿಗೆ ಅವರು ಕೆಲಸ ಮಾಡಿದರು. ಹಿಂದಿಯಲ್ಲಿ ಮಹೇಶ್ ಭಟ್ ಅವರ ʼಕ್ರಿಮಿನಲ್ʼ ಸಿನಿಮಾದಿಂದ ಆರಂಭಿಸಿ, 2007ರಲ್ಲಿ ʼಧೋಖಾʼ ಸಿನಿಮಾದವರೆಗೂ ಕೆಲಸ ಮಾಡಿದರು. ಕನ್ನಡದಲ್ಲಿ ಅವರು ವಿಷ್ಣುವರ್ಧನ್ ಅಭಿನಯದ ಕೆಲವು ಚಿತ್ರಗಳಿಗೆ ಮತ್ತು ಅರ್ಜುನ್ ಸರ್ಜಾ ಅವರ ಚಿತ್ರಗಳಿಗೆ ಸಂಗೀತ ನೀಡಿದರು. ಮಲಯಾಳಂನಲ್ಲಿ, ಅವರು ಕೆಲವು ಮಮ್ಮುಟ್ಟಿ ಚಿತ್ರಗಳಿಗೆ ಸಂಗೀತ ನೀಡಿದರು ಮತ್ತು ಭರತನ್ ನಿರ್ದೇಶಿಸಿದ ದೇವರಾಗಂ ಸಿನಿಮಾಕ್ಕೆ ಕೂಡ ಸಂಗೀತ ನಿರ್ದೇಶನ ಮಾಡಿದರು. ತಮಿಳಿನಲ್ಲೂ ಅವರ ಕೆಲಸ ಗಮನಾರ್ಹವಾಯಿತು.
ಹಲವಾರು ಭಕ್ತಿ ಪ್ರಧಾನ ಚಿತ್ರಗಳಿಗೂ ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಭಗವಾನ್ ಶಿವಭಕ್ತ, ಅನ್ನಮಯ್ಯ, ಶ್ರೀ ರಾಮದಾಸು, ಪಾಂಡುರಂಗಡು, ಶಿರಡಿ ಸಾಯಿ ಮತ್ತು ಇತರ ಚಿತ್ರಗಳಿಗೆ ತಮ್ಮ ಅತ್ಯುತ್ತಮ ಕೊಡುಗೆ ನೀಡಿದರು. 1997ರಲ್ಲಿ ಅನ್ನಮಯ್ಯ ಚಿತ್ರದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯೂ ಬಂದಿತು.
ಕೀರವಾಣಿ ಅವರಿಗೆ ಜನುಮ ದಿನದ ಶುಭಾಶಯ ಹೇಳೋಣ…