Site icon Vistara News

Mohanlal: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್‌ಲಾಲ್ ರಾಜೀನಾಮೆ

Mohanlal

ತಿರುವನಂತಪುರಂ: ಹಿರಿಯ ನಟ ಸಿದ್ದಿಕ್ (veteran actor Siddique) ಮತ್ತು ಚಿತ್ರನಿರ್ಮಾಪಕ ರಂಜಿತ್ ಬಾಲಕೃಷ್ಣನ್ (Filmmaker Ranjith Balakrishnan) ಸೇರಿದಂತೆ ಮಾಲಿವುಡ್‌ನ ಕೆಲವು ಮಂದಿಯ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳು ಕೇಳಿ ಬಂದ ಬಳಿಕ ನಟ ಮೋಹನ್‌ಲಾಲ್ (Mohanlal) ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚಲನಚಿತ್ರ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ನೈತಿಕ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಸಮಿತಿಯ ವಿರುದ್ಧ ಕೆಲವು ನಟರು ಮಾಡಿದ ಆರೋಪಗಳಿಂದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ. ಎರಡು ತಿಂಗಳೊಳಗೆ ಹೊಸ ಸಮಿತಿ ರಚನೆಗೆ ಚುನಾವಣೆ ನಡೆಯಲಿದೆ ಎಂದು ʼಅಮ್ಮʼ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವಾರ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಅನಂತರ ಮಲಯಾಳಂ ಚಿತ್ರರಂಗದ ಹಿರಿಯ ವ್ಯಕ್ತಿಗಳು ಲೈಂಗಿಕ ದೌರ್ಜನ್ಯದ ದೂರುಗಳನ್ನು ಎದುರಿಸುತ್ತಿದ್ದಾರೆ.

ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯದ ಆಘಾತಕಾರಿ ಕಥೆಗಳನ್ನು ಒಳಗೊಂಡಿರುವ ವರದಿಯನ್ನು 2019ರಲ್ಲಿ ಕೇರಳ ಸರ್ಕಾರಕ್ಕೆ ಸಲ್ಲಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗಿತ್ತು. 2019ರಲ್ಲಿ ನಟ ಸಿದ್ದಿಕ್ ಎರ್ನಾಕುಲಂ ಜಿಲ್ಲೆಯ ತಮ್ಮ ಮನೆಯಲ್ಲಿ ಚಲನಚಿತ್ರವೊಂದರ ಪಾತ್ರದ ಕುರಿತು ಮಾತನಾಡಲು ಜೂನಿಯರ್ ಕಲಾವಿದರೊಬ್ಬರನ್ನು ಆಹ್ವಾನಿಸಿ ಅನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ಸಿದ್ದಿಕ್ ಈ ಆರೋಪವನ್ನು ತಿರಸ್ಕರಿಸಿದ್ದು, ಚಲನಚಿತ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಸಿದುಕೊಳ್ಳಲು ಈ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಸಿದ್ದಿಕ್ ಕಳೆದ ವಾರ ತಮ್ಮ ಹುದ್ದೆಯನ್ನು ತ್ಯಜಿಸಿದ್ದು, ರೇವತಿ ಸಂಪತ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅವರು ಲೈಂಗಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಟಿ ಮಿನು ಮುನೀರ್, ಪ್ರಮುಖ ನಟರಾದ ಎಂ. ಮುಖೇಶ್, ಜಯಸೂರ್ಯ ಮತ್ತು ಇತರ ಇಬ್ಬರು 2013 ರಲ್ಲಿ ಚಲನಚಿತ್ರವೊಂದರ ಸೆಟ್‌ನಲ್ಲಿ ತನ್ನನ್ನು ದೈಹಿಕವಾಗಿ ಮತ್ತು ಮಾತಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶೂಟಿಂಗ್ ವೇಳೆ ನನಗೆ ಕಹಿ ಅನುಭವವಾಗಿದೆ. ನಾನು ರೆಸ್ಟ್ ರೂಂಗೆ ಹೋಗಿದ್ದೆ ಮತ್ತು ನಾನು ಹೊರಗೆ ಬಂದಾಗ ಜಯಸೂರ್ಯ ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ತಬ್ಬಿಕೊಂಡು ಮುತ್ತು ಕೊಟ್ಟರು. ನಾನು ಆಘಾತಕ್ಕೊಳಗಾಗಿ ಓಡಿಹೋದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Samantha Ruth Prabhu: ನೀವು ಪರಿಪೂರ್ಣ ತಂದೆಯಾಗುತ್ತೀರಿ; ನಾಗಚೈತನ್ಯ ಬಗ್ಗೆ ಸಮಂತಾ ಹೇಳಿದ ವಿಡಿಯೊ ವೈರಲ್

ಹಿರಿಯ ನಟ ಮಣಿಯನ್ ಪಿಳ್ಳರಾಜು ಅವರು ಆರೋಪಗಳ ತನಿಖೆಗೆ ಒತ್ತಾಯಿಸಿದ್ದು, ಆರೋಪಗಳ ಹಿಂದೆ ಬಹು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ಲ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗೆ ಏಳು ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ.

Exit mobile version