Site icon Vistara News

Mohanlal New Film | ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಹೊಸ ಸಿನಿಮಾ ವೃಷಭ, ಇದು ಅಪ್ಪ-ಮಗನ ಕಥೆ

Mohanlal

ಬೆಂಗಳೂರು : ನಟ ಮೋಹನ್‌ಲಾಲ್‌ (Mohanlal New Film ) ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಲೂಸಿಫರ್‌ ಸೀಕ್ವೆಲ್‌ ನಂತರ ಅವರು ಬಣ್ಣ ಹಚ್ಚುತ್ತಿರುವ ಹೊಸ ಸಿನಿಮಾದ ನಿರ್ದೇಶಕರು ನಂದ ಕಿಶೋರ್‌. ಚಿತ್ರದ ಹೆಸರು: ವೃಷಭ.

ತಂದೆ ಮತ್ತು ಮಗನ ಬಾಂಧವ್ಯದ ಕಥಾ ಹಂದರ ಹೊಂದಿದೆ. ಪ್ರೀತಿ ಮತ್ತು ಪ್ರತೀಕಾರದ ಚಿತ್ರಣ ಈ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೋಹನ್ ಲಾಲ್ ಅವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಗನ ಪಾತ್ರವನ್ನು ತೆಲುಗು ಖ್ಯಾತ ನಟರೊಬ್ಬರು ನಿರ್ವಹಿಸಲಿದ್ದು, ಅವರ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಹೇಳಿಕೊಂಡಿದೆ. ಮೋಹನ್‌ ಲಾಲ್‌ ಅವರು ಈ ಹಿಂದೆ ರಾಜಾವಿಂಟೆ ಮಗನ್‌, ಇರುವರ್‌, ಕಂಪನಿ, ಜನತಾ ಗ್ಯಾರೇಜ್‌ ಚಿತ್ರಗಳಲ್ಲಿ ತಂದೆಯ ಪಾತ್ರ ಮಾಡಿದ್ದರು. ದೃಶ್ಯಂ ಚಿತ್ರದಲ್ಲಂತೂ ಅವರ ಅಪ್ಪನ ಪಾತ್ರ ಮರೆಯಲು ಅಸಾಧ್ಯ. ಹೀಗೆ ಅಪ್ಪನ ಪಾತ್ರಕ್ಕೆ ಹೊಸ ತೂಕ, ತಾಕತ್ತು ನೀಡುವ ಮೋಹನ್‌ಲಾಲ್‌ ವೃಷಭ ಚಿತ್ರದಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ.

ಇದನ್ನೂ ಓದಿ | GodFather | ಒಂದೇ ಫ್ರೇಂನಲ್ಲಿ ಇಬ್ಬರು ಸೂಪರ್‌ ಸ್ಟಾರ್‌ಗಳ ಡ್ಯಾನ್ಸ್? ಫೋಟೊ ವೈರಲ್‌

ಅಭಿಷೇಕ್ ವ್ಯಾಸ್, ಪ್ರವೀರ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. 2023ರಲ್ಲಿ ಚಿತ್ರದ ಚಿತ್ರೀಕರಣ ಮುಗಿಯಲಿದ್ದು, 2024ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಂಡ ಹೇಳಿಕೊಂಡಿದೆ. ಈ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ನಿರ್ದೇಶಕ ಕಿಶೋರ್ ಮಾತನಾಡಿ ʻʻಕಳೆದ 5 ವರ್ಷಗಳಿಂದ ವೃಷಭ ಕಥೆಯನ್ನು ಬರೆಯುತ್ತಿದ್ದೇನೆ. ಪ್ರತಿಯೊಂದು ಪಾತ್ರವನ್ನು ಬರೆಯುವಾಗ, ಆ ಪಾತ್ರ ಹೃದಯದಲ್ಲಿ ಇರಬೇಕಾಗುತ್ತದೆ. ಅದು ವರ್ಷಗಳಾದರೂ ಆ ಪಾತ್ರ ಜೀವಂತವಾಗಿರಬೇಕು. ಸಿನಿಮಾ ನೋಡಿದ ಮೇಲೆಯೂ ಆ ಪಾತ್ರ ಅಚ್ಚುಳಿಯಬೇಕು. ಅಂತಹ ಪಾತ್ರ ವೃಷಭದಲ್ಲಿ ಇದೆ. ಈ ಸಿನಿಮಾವನ್ನು ಮೋಹನ್‌ಲಾಲ್‌ ಅವರೊಂದಿಗೆ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನ್ನ ಕನಸು ನನಸಾಗಿದೆʼʼ ಎಂದು ಹೇಳಿದ್ದಾರೆ.

ಮೋಹನ್ ಲಾಲ್ ಮಾತನಾಡಿ ʻʻನಾನು ಸ್ಕ್ರಿಪ್ಟ್ ಅನ್ನು ಕೇಳಿದ ಕ್ಷಣ, ನಾನು ವೃಷಭದ ಕಲ್ಪನೆಗೆ ಹೋಗಿಬಿಟ್ಟೆ. ಇದು ಅಪ್ಪ-ಮಗನ ಹೈ-ಎನರ್ಜಿ ಡ್ರಾಮಾ ಆಗಿದೆ. ನಂದ ಕಿಶೋರ್ ಅವರ ವಿಷನ್‌ಗೆ ನಾನು ಪ್ರಭಾವಿತನಾಗಿದ್ದೇನೆ. AVS ಸ್ಟುಡಿಯೋಸ್ ಜತೆ ನಾನು ಮಾಡುತ್ತಿರುವುದು ಇದೇ ಮೊದಲ ಚಿತ್ರʼʼ ಎಂದು ಹೇಳಿದರು. ನೆಟ್‌ಫ್ಲಿಕ್ಸ್‌ನ ಮಾಜಿ ಕಾರ್ಯನಿರ್ವಾಹಕ ಅಭಿಷೇಕ್ ವ್ಯಾಸ್ ಅವರು ಸ್ಥಾಪಿಸಿದ AVS ಸ್ಟುಡಿಯೋಸ್‌ ಪ್ರೊಡಕ್ಷನ್ ಹೌಸ್‌ನ ಚೊಚ್ಚಲ ಸಿನಿಮಾ ಇದಾಗಿದೆ.

ಇದನ್ನೂ ಓದಿ | Tyson: ಮಲಯಾಳಂಗೆ ಹೊಂಬಾಳೆ ಫಿಲ್ಮ್ಸ್‌ ಎಂಟ್ರಿ, ಸೂಪರ್‌ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಸಾ‍ಥ್‌

Exit mobile version