ಸಿನಿಮಾ: ಮಾನ್ಸೂನ್ ರಾಗ
ನಿರ್ದೇಶನ : ರವೀಂದ್ರನಾಥ್
ನಿರ್ಮಾಪಕರು: ವಿಖ್ಯಾತ್
ಛಾಯಾಗ್ರಹಣ: ಎಸ್‌ಕೆ ರಾವ್
ಸಂಗೀತ: ಅನೂಪ್ ಸಿಳೀನ್
ತಾರಾಗಣ: ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ಸುಹಾಸಿನಿ, ಯಶ ಶಿವಕುಮಾರ್ ಇತರರು
ರೇಟಿಂಗ್: 3/5
ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ (Monsoon Raaga) ಶುಕ್ರವಾರ (ಸೆ.16)ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಧರ್ಮ, ಪ್ರೀತಿ, ವಯಸ್ಸು, ಯೌವನ, ಹರೆಯ, ಮುಪ್ಪು ಹೀಗೆ ಒಂದಿಷ್ಟು ಮಸಾಲೆಯೊಂದಿಗೆ ಪ್ರೇಮ ರಾಗವನ್ನು ಹೇಳಲು ಹೋಗಿ ಕಥೆ ಮುಗಿಸಬೇಕಲ್ಲ ಎಂಬಂತೆ ಪ್ರೇಕ್ಷಕರನ್ನು ಕೊನೆಯ ಹಂತದವರೆಗೆ ನಿರ್ದೇಶಕರು ಉಳಿಸಿಕೊಳ್ಳಲು ಪ್ರಯತ್ನಿಸುವಂತಿದೆ ಮಾನ್ಸೂನ್ ರಾಗ.
ಮಾನ್ಸೂನ್ ರಾಗಕ್ಕೆ ಅಚ್ಯುತ್ ಕುಮಾರ್ ಹೀರೋ!
ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ʻʻಮುದ್ದಾದ ಮೂತಿ ಮನಸು ಮರಕೋತಿʼʼ ಎನ್ನುವ ಹಾಡಿನ ಮೂಲಕ ನಟ ಅಚ್ಯುತ್ ಕುಮಾರ್ ಪಾತ್ರದ ಅನಾವರಣ. ಹಾಸಿನಿ ಪಾತ್ರಧಾರಿಯಾಗಿ ಸುಹಾಸಿನಿ ಬಣ್ಣ ಹಚ್ಚಿದ್ದರೆ, ರಾಜು ಪಾತ್ರಧಾರಿಯಾಗಿ ಅಚ್ಯುತ್ ಕುಮಾರ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಪ್ರೇಮ ಕಥೆ ಮೂಲಕ ಸಿನಿಮಾ ಮುಂದುವರಿಯುತ್ತದೆ. ನಾಲ್ಕು ಪ್ರೇಮ ಕಥೆಗಳ ಸಮ್ಮಿಶ್ರಣದಲ್ಲಿ ಸಾಗುವ ಕಥೆಗೆ ಉತ್ತರ ಕೊನೆಗೆ ಪ್ರೀತಿ ಒಂದೇ.
ಮೊದಲಾರ್ಧ ಭಾಗ ಸಿನಿಮಾದಲ್ಲಿ ಪಾತ್ರದ ಪರಿಚಯದ ಜತೆ ಒಂದಕ್ಕೊಂದು ಕಥೆಗಳು ಕೊಂಡಿ ಬೆಸೆಯುತ್ತಾ ಮುಂದೆ ಸಾಗುತ್ತದೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್ ನಟನೆ ಆಕರ್ಷಣೀಯ.
ಪಾತ್ರಕ್ಕೆ ಜೀವ ತುಂಬಿದ ತಾರಾಗಣ
ಚಿತ್ರತಂಡ ಹೇಳಿದ ಹಾಗೇ ಬಹುತೇಕ ಭಾಗ, ೮೦% ಸಿನಿಮಾ ಮಳೆಯಲ್ಲಿ ಚಿತ್ರೀಕರಣವಾಗಿದೆ. ಧರ್ಮಗಳ ಕಥಾ ವಸ್ತುವನ್ನು ಇಟ್ಟುಕೊಂಡು ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೂ ನಿರ್ದೇಶಕರು ನ್ಯಾಯ ಒದಗಿಸಿದ್ದಾರೆ. ಸುಹಾಸಿನಿ ಮತ್ತು ಅಚ್ಯುತ್ ಕುಮಾರ್ ನಟನೆ ಬಗ್ಗೆ ಮಾತೇ ಇಲ್ಲ. ಹಾಗೂ ಪರದೆಯಲ್ಲಿ ಇವರಿಬ್ಬರ ಜೋಡಿ ಮುಖ್ಯ ಹೈಲೈಟ್.
ಇನ್ನು ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಡಾಲಿ ಹಾಗೂ ರಚಿತಾ ಕಾಂಬಿನೇಷನ್ ನೋಡುವಾಗ ಕ್ಯೂಟ್ ಪೇರ್ ಎನಿಸುವುದು ಸಹಜವೇ. ಲೈಂಗಿಕ ಕಾರ್ಯಕರ್ತೆಯಾಗಿ ರಚಿತಾ ರಾಮ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದು ಎರಡು ಸುಂದರ ಆತ್ಮಗಳ – ಒಬ್ಬ ಲೈಂಗಿಕ ಕಾರ್ಯಕರ್ತೆ ಮತ್ತು ಒಬ್ಬ ಸಾಮಾನ್ಯ ಮನುಷ್ಯ ಪ್ರೀತಿಯಲ್ಲಿ ಸಿಲುಕುವ ಕಥೆಯನ್ನು. ಆಳವಾದ ಭಾವನಾತ್ಮಕತೆಯಿಂದ ತೋರಿಸಿದ್ದಾರೆ. ನಾಲ್ಕು ಜೋಡಿಗಳ ಪ್ರೇಮ ಕಥೆಯಲ್ಲಿ ಬಾಲ್ಯ, ಯವ್ವನ, ಹರೆಯ, ಮುಪ್ಪವನ್ನು ಆಧಾರ ಸ್ತಂಭವಾಗಿಸಿಕೊಟ್ಟುಕೊಂಡು ಕೊನೆಗೆ ಪ್ರೀತಿಯೇ ಎಲ್ಲ ಎಂದು ಸಾರುವ ಈ ಕಥೆ ಮೆಚ್ಚಿಕೊಳ್ಳಲೇ ಬೇಕು.
ಇದನ್ನೂ ಓದಿ | Movie Review | 777 ಚಾರ್ಲಿ ಪ್ರೀತಿಯ ಜರ್ನಿಯಲ್ಲಿ ನಗುವಿದೆ, ಕಣ್ಣೀರಿದೆ, ಮೌನವೂ ಇದೆ!
ನಗೆಗಡಲಲ್ಲಿ ತೇಲಿಸಿದ ಮಾನ್ಸೂನ್ ರಾಗ
ಟೆಕ್‌ನಿಕಲ್ ವಿಚಾರಕ್ಕೆ ಬಂದರೆ ಪ್ರತಿ ಫ್ರೇಮ್ ಚೆಂದವಾಗಿ ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ ಛಾಯಾಗ್ರಾಹಕ ಎಸ್‌ಕೆ ರಾವ್ . ಡಾಲಿ ಧನಂಜಯ್ ಇಷ್ಟೂ ಸಿನಿಮಾಗಳಲ್ಲಿ ಈ ಸಿನಿಮಾ ವಿಭಿನ್ನವಾಗಿದ್ದು ಡಾಲಿ ಅವರ ಮಾಸ್ ಫೈಟಿಂಗ್, ಪಂಚಿಂಗ್ ಡೈಲಾಗ್ ಸಿನಿ ಪ್ರಿಯರನ್ನು ರಂಜಿಸುತ್ತದೆ. ʻʻಕನ್ನಡಿ ಇಲ್ಲದೆ ಬದುಕಕ್ಕಾಗಲ್ಲ ಎನ್ನುವ ಹುಡುಗೀರು ನೀವು…ಕನ್ನಡ ಇಲ್ಲದೇ ಬದುಕಕ್ಕಾಗಲ್ಲ ಎನ್ನುವ ಹುಡುಗರು ನಾವುʼʼ ಎನ್ನುವಂಥ ಪಂಚಿಂಗ್ ಡೈಲಾಗ್‌ಗೆ ಶಿಳ್ಳೆಗಳು ಬೀಳುತ್ತವೆ.
ಜಕ್ಕಣ್ಣನ ಪಾತ್ರ ಈ ಸಿನಿಮಾದಲ್ಲಿ ನೀತಿಯುತವಾಗಿದ್ದು, ಒಂದು ಕ್ಷಣ ಭಾವುಕರಾಗುವುದು ಖಂಡಿತ. ಅನೂಪ್ ಸೀಳಿನ್ ಸಂಗೀತ ಸಿನಿಮಾಕ್ಕೆ ಇರುವ ಪ್ಲಸ್ ಪಾಯಿಂಟ್. ಸಿನಿಮಾದ ಹಿನ್ನೆಲೆ ಧ್ವನಿ ಹಾಗೂ ಹಾಡುಗಳು ಸಿನಿಮಾ ಮುಗಿದ ನಂತರವೂ ಹಾಗೇ ಮನಸ್ಸಿನಲ್ಲಿ ಉಳಿಯುತ್ತವೆ. ಎರಡನೇ ಭಾಗದಲ್ಲಿ ನಿರ್ದೇಶಕರು ಕಥೆಗೆ ಏನಾದರೂ ಮಾಡಿ ಕೊಂಡಿ ಬೆಸೆದು ಮುಗಿಸಿದರೆ ಸಾಕು ಎಂದುಕೊಂಡಂತೆ ಇದೆ ಕ್ಲೈಮ್ಯಾಕ್ಸ್.
ಪ್ರೇಮರಾಗವಾಗಿ ಹೊರಹೊಮ್ಮಿತು ಮಾನ್ಸೂನ್ ರಾಗ!
ಇದು ಮಾನ್ಸೂನ್ ರಾಗವಲ್ಲ. ಪ್ರೇಮ ರಾಗ ! ಪ್ರೇಮಕ್ಕೆ ಧರ್ಮ, ವಯಸ್ಸು, ಜಾತಿ, ದೇಹ…ಯಾವುದೂ ಮುಖ್ಯವಲ್ಲ ಅವೆಲ್ಲವನ್ನೂ ಮೀರಿದ್ದು ಪ್ರೀತಿ ಹಾಗೂ ಮನಸ್ಸು ಎಂದು ಹೇಳಲು ಹೊರಟಿರುವ ಈ ರಾಗಕ್ಕೆ…ಕ್ಲೈಮ್ಯಾಕ್ಸ್ ಕ್ಯೂರಿಯಸ್ ಆಗಿ ನೀಡಿದ್ದಾರೆ. ಅಚ್ಚರಿಯ ಅಂತ್ಯವನ್ನು ಹಾಡಿದ್ದಾರೆ ನಿರ್ದೇಶಕರು.
ಕೆಲವೊಂದು ಸನ್ನಿವೇಶಗಳು ಸಿಲ್ಲಿ ಎನಿಸುತ್ತವೆ. ಒಂದು ಬಾರಿಗೆ ನೋಡಬಹುದಾದ ಸಿನಿಮಾ ಎಂದು ಹೇಳಬಹುದು. ಡಾಲಿಯ ನಟನೆ ವಿಚಾರಕ್ಕೆ ಬಂದರೆ ಭಾವುಕರಾಗಿ, ಮಾಸ್ ಆಗಿ ಕಾಣಿಸಕೊಂಡಿದ್ದು ನಟ ಭಯಂಕರ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ | Movie Review | ಗಾಳಿಪಟ 2 ಸಿನಿಮಾ ಒಂದು ಸುಂದರ ಹಾಗೂ ಆಹ್ಲಾದಕರ ಪಯಣ