ಮುಂಬೈ: ಭಾರತವು ಬುಧವಾರ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶವಾಗಿ (Chandrayaan-3) ಹೊರಹೊಮ್ಮಿದೆ. ವಿಶೇಷವೆಂದರೆ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲನೇ ದೇಶವಾಗಿಯೂ ಭಾರತ ಕೀರ್ತಿ ಪಡೆದುಕೊಂಡಿದೆ. ಈ ದೊಡ್ಡ ಯಶಸ್ಸಿನ ಬೆನ್ನಲ್ಲೇ ಸಿನಿಮಾ ಕ್ಷೇತ್ರದ ಹಲವರು ಈ ಸಾಧನೆಯ ಕುರಿತಾಗಿ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಸಿನಿಮಾ ಹೆಸರು ನೋಂದಣಿ ಮಾಡಿಕೊಳ್ಳುವಂತಹ ಮುಂಬೈನಲ್ಲಿರುವ ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA), ನಿರ್ಮಾಪಕರ ಸಂಘ ಮತ್ತು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಮಂಡಳಿ (IFTPC)ಯ ಕಚೇರಿಗಳಿಗೆ ಬುಧವಾರ ಮತ್ತು ಗುರುವಾರ ದೊಡ್ಡ ಪ್ರಮಾಣದಲ್ಲಿ ಸಿನಿಮಾ ನೋಂದಣಿಗೆ ಅನೇಕರು ಮುಗಿಬಿದ್ದಿದ್ದಾರೆ.
ಚಂದ್ರಯಾನ 3, ಮಿಷನ್ ಚಂದ್ರಯಾನ 3, ಚಂದ್ರಯಾನ 3: ದಿ ಮೂನ್ ಮಿಷನ್, ವಿಕ್ರಮ್ ಲ್ಯಾಂಡರ್, ಚಂದ್ರಯಾನ 3: ದಿ ನ್ಯೂ ಚಾಪ್ಟರ್, ಭಾರತ್ ಚಾಂದ್ ಪರ್ ಸೇರಿದಂತೆ ಚಂದ್ರಯಾನಕ್ಕೆ ಸಂಬಂಧಿಸಿದ ಹಲವಾರು ಹೆಸರುಗಳ ಸಿನಿಮಾಗಳು ನೋಂದಣಿಗೆ ಬಂದಿವೆಯೆಂತೆ. ಹಲವು ಚಿತ್ರ ನಿರ್ಮಾಪಕರುಗಳು ಹಾಗೂ ಪ್ರೊಡಕ್ಷನ್ ಹೌಸ್‌ಗಳು ಈ ಸಿನಿಮಾ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುವುದಾಗಿ ವರದಿಯಿದೆ.
“ಚಂದ್ರಯಾನದ ಕುರಿತಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಅನೇಕ ಅರ್ಜಿಗಳು ಬಂದಿವೆ. ಆ ಎಲ್ಲ ಅರ್ಜಿಗಳನ್ನು ಮುಂದಿನ ವಾರದಲ್ಲಿ ಪರಿಶೀಲನೆ ಮಾಡಲಿದ್ದೇವೆ. ಹಾಗೆಯೇ ಅದರಲ್ಲಿ ಕೆಲವರಿಗೆ ಮಾತ್ರ ಅನುಮತಿ ನೀಡಲಿದ್ದೇವೆ. ಈ ಹಿಂದೆ ಪುಲ್ವಾಮಾ ದಾಳಿ ಆದಾಗಲೂ ಸುಮಾರು 30-40ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಬಹುತೇಕ ಹೆಸರುಗಳು ಒಂದೇ ಆಗಿದ್ದವು. ಅವುಗಳಲ್ಲಿ ಕೆಲವಕ್ಕೆ ಅನುಮತಿ ನೀಡಲಾಗಿತ್ತಾದರೂ ಅದರ ಬಗ್ಗೆ ಹೆಚ್ಚಿನ ಸಿನಿಮಾಗಳಾಗಲೀ ಅಥವಾ ವೆಬ್ ಸರಣಿಗಳಾಗಲೀ ಬಿಡುಗಡೆಯಾಲಿಲ್ಲ. ನಿಜವಾಗಿಯೂ ಸಿನಿಮಾ ಮಾಡಲು ಬಯಸುತ್ತಾರೆ ಎನ್ನುವಂತವರಿಗೆ ಮಾತ್ರ ಈ ಬಾರಿ ಅನುಮತಿ ಕೊಡಲಿದ್ದೇವೆ” ಎಂದು IMPAA ಕಚೇರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Viral video: ವಿಚಾರಣೆಗೆ ತೆರಳಿದ ಪೊಲೀಸರ ಮೇಲೆ ಬೆಂಕಿ ಎಸೆದು ಕೋಲಾಹಲ ಸೃಷ್ಟಿಸಿದ ಮಹಿಳೆ!
ಈ ರೀತಿಯ ಸಿನಿಮಾ ಹೆಸರು ನೋಂದಣಿ ಕೆಲಸವನ್ನು ಹಣ ಮಾಡುವ ವಿಧಾನ ಎಂದು ವ್ಯಾಪಾರ ತಜ್ಞರಾಗಿರುವ ಅತುಲ್ ಮೋಹನ್ ಅವರು ತಿಳಿಸಿದ್ದಾರೆ. “ಸಿನಿಮಾದ ಶೀರ್ಷಿಕೆಯನ್ನು ನೋಂದಣಿ ಮಾಡಿಕೊಳ್ಳುವುದಕ್ಕೆ 400-500 ರೂ. ಸಾಕು. ಈ ರೀತಿಯ ಘಟನೆಗಳು ಆದಾಗ ಕೆಲವರು ಅದರ ಹೆಸರನ್ನು ನೋಂದಣಿ ಮಾಡಿಟ್ಟುಕೊಳ್ಳುತ್ತಾರೆ. ಆ ನಿರ್ದಿಷ್ಟ ಘಟನೆಯ ಬಗ್ಗೆ ಸಿನಿಮಾ ನಿರ್ಮಿಸಲು ಆಸಕ್ತಿ ಹೊಂದಿರುವ ದೊಡ್ಡ ನಿರ್ಮಾಪಕರು ಅಥವಾ ನಿರ್ಮಾಣ ಸಂಸ್ಥೆ ಹೊರಟಾಗ ಅವರಿಗೆ ಶೀರ್ಷಿಕೆಯ ತೊಂದರೆಯುಂಟಾಗುತ್ತದೆ. ಆಗ ಅವರು ಈ ಶೀರ್ಷಿಕೆಯ ಹಕ್ಕು ಹೊಂದಿರುವವರನ್ನು ಹುಡುಕಬೇಕು. ಅವರು ಆಗ ಭಾರೀ ಹಣ ಪಡೆದು, ಶೀರ್ಷಿಕೆ ಬಿಟ್ಟುಕೊಡುತ್ತಾರೆ. ಇದು ಹಣ ಮಾಡುವ ತಂತ್ರವಾಗಿದೆ” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರೂ ಪ್ರತಿಕ್ರಿಯೆ ಕೊಟ್ಟಿದ್ದಾರೆ. “ಚಂದ್ರಯಾನ 3ರ ಬಗ್ಗೆ ಶೀರ್ಷಿಕೆ ನೋಂದಣಿ ಮಾಡಿಕೊಳ್ಳಲು ಜನರು ತೋರುತ್ತಿರುವ ಆತುರ ನನಗೇನೂ ಆಶ್ಚರ್ಯ ತರಿಸಿಲ್ಲ. ಈ ಹಿಂದೆ ನಾವು ಮಿಷನ್ ಮಂಗಲ್, ʼರಾಕೆಟ್ರಿ: ದಿ ನಂಬಿ ಎಫೆಕ್ಟ್ʼನಂತಹ ಸಿನಿಮಾಗಳನ್ನು ನೋಡಿದ್ದೇವೆ. ಆ ಸಿನಿಮಾಗಳು ದೊಡ್ಡ ದೊಡ್ಡ ನಟರೊಂದಿಗೆ ದೊಡ್ಡ ಯಶಸ್ಸನ್ನು ಕಂಡಿವೆ. ಹಾಗಾಗಿ ಈಗಲೂ ಸಿನಿಮಾ ನೋಂದಣಿಗೆ ಜನರು ಮುಗಿಬಿದ್ದಿದ್ದಾರೆ” ಎಂದು ಅವರು ಹೇಳಿದ್ದಾರೆ.