ಇಂದು ಅಂತಾರಾಷ್ಟ್ರೀಯ ಹುಲಿ ದಿನ (International Tiger Day). ಹುಲಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜುಲೈ 29ರಂದು ಹುಲಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಹುಲಿಗಳನ್ನು ರಕ್ಷಿಸುವುದು ಮತ್ತು ಅವುಗಳಿಗೆ ಕಾಡಿನಲ್ಲಿ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿಕೊಡುವ ಗುರಿಯನ್ನು ಈ ದಿನ ಹೊಂದಿದೆ. ಹುಲಿಗಳ ಕುರಿತಾಗಿ ಸಿನಿಮಾ ರಂಗ ಕೂಡ ಗಮನ ಹರಿಸಿದ್ದು, ಹುಲಿಗಳ ಕುರಿತಾಗಿಯೇ ಅನೇಕ ಚಿತ್ರಗಳನ್ನೂ ರಚಿಸಿದೆ. ಅವುಗಳಲ್ಲಿ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ಜುನೂನ್ (1992):
ಈ ಸಿನಿಮಾದಲ್ಲಿ ರಾಹುಲ್ ರಾಯ್ ಅವರು ವಿಕ್ರಮ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಕ್ರಮ್ ಪ್ರತಿ ಹುಣ್ಣಿಮೆಯಂದು ಹುಲಿಯಾಗಿ ರೂಪಾಂತರಗೊಳ್ಳುವ ಕಥೆಯನ್ನು ಹೇಳಲಾಗಿದೆ. ಆ ರೀತಿ ಆದಾಗ ಆತ ಬೇಟೆಗಾರರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಪರದಾಡುವುದು ಹಾಗೆಯೇ ಹುಲಿಯೊಂದರಿಂದ ರಕ್ಷಣೆಗಾಗಿ ಹೋರಾಡುವುದನ್ನು ಸಿನಿಮಾದಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ನಟಿ ಪೂಜಾ ಭಟ್ ಮತ್ತು ಅವಿನಾಶ್ ಮಾಧವನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಟು ಬ್ರದರ್ಸ್(2004):
ಇದು ಒಡಹುಟ್ಟಿದ ಎರಡು ಹುಲಿ ಮರಿಗಳು ಚಿಕ್ಕ ವಯಸ್ಸಿನಲ್ಲೇ ಬೇರಾಗುವ ಕಥೆಯನ್ನು ಹೊಂದಿದೆ. ಮುಂದೆ ದೊಡ್ಡವರಾದ ಹುಲಿಗಳು ಎರಡೂ ಒಟ್ಟಿಗೆ ಸೇರಿಕೊಳ್ಳುತ್ತವಾದರೂ ಅವೆರಡರುಗಳ ನಡುವೆ ಸಂಘರ್ಷ ಉಂಟಾಗುತ್ತದೆ. ಇದು ಹಾಲಿವುಡ್ ಸಿನಿಮಾವಾಗಿದೆ.
ಕಾಲ್ (2005):
ಈ ಸಿನಿಮಾವನ್ನು ಜಿಮ್ ಕಾರ್ಬೆಟ್ ರಾಷ್ಟ್ರೀಯ ವನ್ಯಜೀವಿ ಉದ್ಯಾನವನದಲ್ಲಿ ಚಿತ್ರೀಕರಿಸಲಾಗಿದೆ. ಹುಲಿ ತಜ್ಞರೊಬ್ಬರು, ತಮ್ಮ ಸಂಗಾತಿ, ಇಬ್ಬರು ಪ್ರವಾಸಿಗರು ಮತ್ತು ಸ್ಥಳೀಯ ನಾಯಕರ ಸುತ್ತ ಈ ಸಿನಿಮಾ ಕಥೆ ಹೆಣೆಯಲಾಗಿದೆ. ಅಜಯ್ ದೇವಗನ್, ವಿವೇಕ್ ಒಬೆರಾಯ್ ಮತ್ತು ಜಾನ್ ಅಬ್ರಹಾಂ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಅವರು ಹುಲಿಯೊಂದರಿಂದ ರಕ್ಷಿಸಿಕೊಳ್ಳಲು ಒದ್ದಾಡುವ ಚಿತ್ರಣವನ್ನು ತೋರಿಸಲಾಗಿದೆ.
ಬರ್ನಿಂಗ್ ಬ್ರೈಟ್ (2010):
ಈ ಸಿನಿಮಾದಲ್ಲಿ ಯುವತಿಯೊಬ್ಬಳು ತನ್ನ ತಮ್ಮನೊಂದಿಗೆ ಚಂಡಮಾರುತದ ಸಮಯದಲ್ಲಿ ಹಸಿದ ಹುಲಿ ಇರುವ ಮನೆಯಲ್ಲಿ ಸಿಲುಕಿಕೊಳ್ಳುವ ಕಥೆಯನ್ನು ಹೊಂದಿದೆ. ಇದೂ ಕೂಡ ಹಾಲಿವುಡ್‌ನ ಅದ್ಭುತ ಸಿನಿಮಾಗಳಲ್ಲಿ ಒಂದಾಗಿದೆ.
ಲೈಫ್ ಆಫ್ ಪೈ (2012):
ಸಮುದ್ರದಲ್ಲಿ ನಡೆಯುವ ದುರಂತದಿಂದ ಬಚಾವಾದ ಯುವಕನೊಬ್ಬ ಸಮುದ್ರ ಪ್ರಯಾಣ ಮಾಡುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದಲ್ಲಿ ನಾಯಕ ತನ್ನೊಂದಿಗೆ ಸಮುದ್ರದಲ್ಲಿ ಸಿಲುಕಿಕೊಂಡ ಹುಲಿಯೊಂದಿಗೆ ಬಂಧ ಬೆಳೆಸಿಕೊಳ್ಳುವ ವಿಶೇಷ ಕಥೆಯಿದೆ.
ದಿ ಜಂಗಲ್ ಬುಕ್ (2016):
ಶೇರ್ ಖಾನ್ ಹೆಸರಿನ ಅಪಾಯಕಾರಿ ಹುಲಿಯಿಂದಾಗಿ ಮೋಗ್ಲಿ ಹೆಸರಿನ ಬಾಲಕ ಕಾಡನ್ನು ಬಿಟ್ಟು ಹೋಗಬೇಕಾಗುತ್ತದೆ. ಆದರೆ ಆತ ಅಲ್ಲಿ ಚಿರತೆ ಮತ್ತು ಕರಡಿಯ ಸಹಾಯದಿಂದ ತನ್ನ ನೈಜತೆಯನ್ನು ಕಂಡುಕೊಳ್ಳುವ ವಿಶೇಷವಾದ ಕಥೆಯನ್ನು ಈ ಸಿನಿಮಾ ಹೊಂದಿದೆ.
ಮಿಷನ್ ಟೈಗರ್ (2016):
ಇದು ಭಾರತದಲ್ಲಿ ಹುಲಿ ಬೇಟೆಯ ಕಾರಣದ ಮೇಲೆ ಬೆಳಕು ಚೆಲ್ಲುವ ಸಿನಿಮಾವಾಗಿದೆ. ಹುಲಿಗಳನ್ನು ಸಂರಕ್ಷಿಸಬೇಕು ಎನ್ನುವ ಸಂದೇಶವನ್ನು ಸಿನಿಮಾದಲ್ಲಿ ಕೊಡಲಾಗಿದೆ. ಈ ಸಿನಿಮಾದಲ್ಲಿ ಬಿಜುಲಾಲ್ ಮತ್ತು ವಿಜಯ್ ರಾಝ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.