ಬೆಂಗಳೂರು: ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯೋಗಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ರೂಪಗೊಂಡಿರುವ ಸಿನಿಮಾ ರಂಗು ರಗಳೆ. ಕಲಾ ಪ್ರೇಮದಿಂದ ಯುವ ಪ್ರತಿಭೆ ಜಾಕ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಹೂರ್ತ ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿಂದು ನೆರವೇರಿದೆ.
ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ಮೆಟ್ರೋ ಸಾಗಾ ಮೂಲಕ ಮನೆ ಮಾತಾಗಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಅಭಿದಾಸ್ ಮಾತಾನಾಡಿ, ʻʻಸ್ಕ್ರೀಪ್ಟ್ ಕೇಳಿ ತುಂಬಾ ಇಷ್ಟವಾಯ್ತು. ಮೇ ಮೊದಲ ವಾರವೇ ಚಿತ್ರೀಕರಣ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಟೀಂ ಜತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೇನೆ. ಗಟ್ಟಿಮೇಳ ಸೀರಿಯಲ್ ನಲ್ಲಿ ನೀವೆಲ್ಲಾ ನೋಡಿ ಇರುತ್ತೀರಾ. ಈಗ ರಂಗು ರಗಳೆ ಸಿನಿಮಾ ಮೂಲಕ ಹೀರೊ ಆಗಿ ನಟಿಸುತ್ತಿದ್ದೇನೆʼʼ ಎಂದರು.
ಇದನ್ನೂ ಓದಿ:Kannada New Movie: ‘ದಿಲ್ ಮಾರ್’ ಸಿನಿಮಾಗೆ ಡಿಂಪಲ್ ಹಯಾತಿ ನಾಯಕಿ
ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ ರಂಗು ರಗಳೆ ಸಿನಿಮಾಗೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಾಗರ್ ಎಂಬಿ ಸಂಕಲನ, ಶೇಖರ್ ಛಾಯಾಗ್ರಹಣವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.