Site icon Vistara News

Adipurush Movie : ಆದಿಪುರುಷ ಸಿನಿಮಾ ಮಾಡಿದರವನ್ನು ಸುಟ್ಟು ಹಾಕಬೇಕು ಎಂದ ಭೀಷ್ಮ!

mukesh khanna talks about adipurush movie

#image_title

ಮುಂಬೈ: ಓಂ ರಾವತ್‌ ನಿರ್ದೇಶನದ ಆದಿಪುರುಷ ಸಿನಿಮಾ (Adipurush Movie) ಬಿಡುಗಡೆಗೊಂಡು ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಮಾಯಣ ಕಥೆಗೂ ಸಿನಿಮಾಕ್ಕೂ ಹೆಚ್ಚಿನ ವ್ಯತ್ಯಾಸವಿರುವ ಹಿನ್ನೆಲೆಯಲ್ಲಿ ಜನರು ಸಿನಿತಂಡದ ಬಗ್ಗೆ ಬೇಸರ ಮತ್ತು ಕೋಪವನ್ನು ಹೊರಹಾಕುತ್ತಿದ್ದಾರೆ. ಅದೇ ರೀತಿಯಲ್ಲಿ ಶಕ್ತಿಮಾನ್‌ ಧಾರಾವಾಹಿಯ ನಟ, ಮಹಾಭಾರತದಲ್ಲಿ ಭೀಷ್ಮನ ಪಾತ್ರ ನಿರ್ವಹಿಸಿ ಅಪಾರ ಖ್ಯಾತಿ ಗಳಿಸಿದ್ದ ಮುಕೇಶ್‌ ಖನ್ನಾ ಕೂಡ ಆದಿಪುರುಷ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ರಾಮಾಯಣವನ್ನು ಒಂದು ಕೆಟ್ಟ ಹಾಸ್ಯದ ರೀತಿಯಲ್ಲಿ ಆದಿಪುರುಷ ಸಿನಿಮಾದಲ್ಲಿ ತೋರಿಸಲಾಗಿದೆ. ರಾಮಾಯಣ ಓದದೆಯೇ ಸಿನಿಮಾ ಮಾಡಿದಂತಿದೆ. ರಾವಣ ಶಿವನಿಂದ ವರ ಪಡೆದಿದ್ದ ಎನ್ನುವ ಜ್ಞಾನವೂ ಇಲ್ಲದವರು ದೊಡ್ಡ ದೊಡ್ಡ ಮಾತುಗಳನ್ನು ಆಡಲು ಬರುತ್ತಿದ್ದಾರೆ. ಅಂಥವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. 50 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿಲ್ಲಿಸಿ ಸುಟ್ಟು ಹಾಕಬೇಕು” ಎಂದು ಗುಡುಗಿದ್ದಾರೆ ಮುಕೇಶ ಖನ್ನಾ.

ಇದನ್ನೂ ಓದಿ: Adipurush Movie : ‘ಆದಿಪುರುಷ’ನ ಬಗ್ಗೆ ಹಳೆಯ ರಾಮಾಯಣದ ನಟ, ನಟಿಯರ ಅಭಿಪ್ರಾಯ ಏನಿದೆ?
“ಇಷ್ಟೆಲ್ಲ ಆದ ಮೇಲೆ ನಿರ್ದೇಶಕ ಓಂ ರಾವತ್‌ ಮತ್ತು ಸಂಭಾಷಣೆಗಾರ ಮನೋಜ್‌ ಎಲ್ಲಾದರೂ ಮುಖ ಮುಚ್ಚಿಕೊಂಡು ಕುಳಿತಿರುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಅದನ್ನು ವಿವರಿಸುವುದಕ್ಕೆ ಮುಂದಾಗಿದ್ದಾರೆ. ಸನಾತನ ಧರ್ಮಕ್ಕಾಗಿ ಸಿನಿಮಾ ಮಾಡಿದ್ದಾಗಿ ಹೇಳುತ್ತಾರೆ. ಅವರ ಸನಾತನ ಧರ್ಮವೇನು ನಮ್ಮ ಸನಾತನ ಧರ್ಮಕ್ಕಿಂತ ಭಿನ್ನವಾಗಿದೆಯೇ? ವಾಲ್ಮೀಕಿ ರಾಮಾಯಣ, ತುಳಸಿದಾಸ ರಾಮಾಯಣದಂತೆ ಇದು ನಮ್ಮ ರಾಮಾಯಣ ಎಂದು ಹೇಳಿಕೊಳ್ಳುತ್ತಾರೆ” ಎಂದು ಮುಕೇಶ್‌ ಅವರು ಸಿನಿ ತಂಡದ ಬಗ್ಗೆ ಸಿಟ್ಟಿನಿಂದ ನುಡಿದಿದ್ದಾರೆ.

ಆದಿಪುರುಷ ಸಿನಿಮಾ ಬಗ್ಗೆ ಈ ರೀತಿ ಆಕ್ಷೇಪ ವ್ಯಕ್ತಪಡಿಸಿದವರಲ್ಲಿ ಮುಕೇಶ್‌ ಮೊದಲನೆಯವರಲ್ಲ. ಈ ಹಿಂದೆ ದೂರದರ್ಶನ ಕಾರ್ಯಕ್ರಮ ಸಿಯಾ ಕೆ ರಾಮ್‌ನಲ್ಲಿ ಲಕ್ಷ್ಮಣ ಪಾತ್ರವನ್ನು ನಿರ್ವಹಿಸುತ್ತಿದ್ದ ಕರಣ್ ಸುಚಕ್ ಕೂಡ ಈ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದರು. ಯಾರೂ ಈ ಸಿನಿಮಾವನ್ನು ನೋಡಬೇಡಿ ಎಂದು ಕೇಳಿಕೊಂಡಿದ್ದರು. ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ ಕೂಡ ಆದಿಪುರುಷ ತಯಾರಕರನ್ನು ಟೀಕಿಸಿದ್ದಾರೆ ಮತ್ತು ಈ ಸಿನಿಮಾವನ್ನು ‘ಹಾಲಿವುಡ್ ಕಿ ಕಾರ್ಟೂನ್’ ಎಂದು ವ್ಯಂಗ್ಯವಾಡಿದ್ದಾರೆ.

Exit mobile version