–ಶಿವರಾಜ್ ಡಿ ಎನ್ ಎಸ್
ಆಚಾರ್ & ಕೋ, (Must Watch Movies) ಎಳೆಮಾವಿನ ಕಾಯಿಯ ಉಪ್ಪಿನಕಾಯಿ! ಬಯಸಿ ತಿನ್ನೋರಿಗೆ ಇದು ರುಚಿಸಬಹುದು. ಬಯಸದೇ ತಿಂದವರಿಗೆ ಚೂರು ಒಗರು ಎನಿಸಲೂಬಹುದು. ಸಿಂಪಲ್ ಕತೆಯಾದರೂ ಸಿಂಪಲ್ ಸಿನಿಮಾವಲ್ಲ ಅನಿಸೋದಲ್ಲದೇ ಕಡೆಯ ನಿಮಿಷಗಳಲ್ಲಿ ಫೀಲ್ ಗುಡ್ ಸಿನಿಮಾ ಎನಿಸಿಕೊಳ್ಳುತ್ತದೆ. ನಿರ್ದೇಶಕರು ಕಾಲಘಟ್ಟ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಪಾತ್ರ ಪೋಷಣೆ ಅಚ್ಚುಕಟ್ಟಾಗಿದೆ. ಸಿನಿಮಾ ಅದ್ಭುತ ಅಮೋಘ ಅನಿಸದಿದ್ದರೂ ಇದೆಂಥ ಸಿನಿಮಾ ರೀ ಎನ್ನುವಂಥ ಆಭಾಸ, ಅವೈಜ್ಞಾನಿಕ ಸನ್ನಿವೇಶ ಸಿನಿಮಾದಲ್ಲಿ ಇಲ್ಲ.
ಸಿನಿಮಾದ ಮೊದಲ ದೃಶ್ಯದಲ್ಲಿ ಸುಧಾ ಸಂಚಿಕೆಯ ಹಾಳೆ ಮಗುಚುತ್ತ ಮನುಷ್ಯರನ್ನ ಮಾವಿಕಾಯಿಗೆ ಹೋಲಿಸಿ ಮಾತಾಡುವ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುತ್ತದೆ. ನಂತರ ಆಚಾರ್ರ ಮನೆ ರೇಡಿಯೋದಲ್ಲಿ ಸುಪ್ರಭಾತ ಶುರುವಾಗಿ ಕತೆಯ ಕಾಲಘಟ್ಟ ಹಾಗೂ ಅಂದಿನ ಬೆಂಗಳೂರಿನ ವಾತಾವರಣ ಪರಿಚಯಿಸಿ ಸೀದಾ ಆಚಾರ್ಯರ ಮನೆಗೆ ಬಂದು ನಿಲ್ಲುತ್ತೆ, ಅಲ್ಲ ಶುರುವಾಗುತ್ತೆ! ಮನೆಯ ಯಜಮಾನ ಮಧುಸೂದನ್ ಆಚಾರ್ಯರು ಸರ್ಕಾರಿ ಸಿವಿಲ್ ಎಂಜೀನಿಯರ್, ಒಬ್ಬ ಮಗಳ ಮದುವೆ ಮಾಡಿದ್ದಾರೆ. ಇನ್ನೂ ಆರು ಮೂರು ಒಂಭತ್ತು ಮನೆಯಲ್ಲಿವೆ. ಇದನ್ನೆಲ್ಲ ಪರಿಚಯಿಸಿ ಪ್ರೇಕ್ಷರನ್ನು ತನ್ನೊಳಗೆ ಎಳೆದುಕೊಳ್ಳುವ ಸಿನಿಮಾ ಸುಮಾರು 1961ರಿಂದ 1975ರ ತನಕ ಆಚಾರ್ರ ಮನೇಲಿ ಏನೆಲ್ಲ ನಡೆಯುತ್ತದೆ ಅನ್ನೋದನ್ನ ಅರ್ಥಮಾಡಿಸಿ ಕೊನೆಗೆ ಅದೇ ಸುಧಾ ಸಂಚಿಕೆಯ ಕಡೆಯ ಪುಟ ತೋರಿಸುವ ಮೂಲಕ ಸಿನಿಮಾ ಕೊನೆಯಾಗುತ್ತದೆ.
ವಿಸ್ತೃತ ಕಥಾ ಹಂದರ
ಕಟ್ಟುನಿಟ್ಟಾದ ತಂದೆ, ಪ್ರೀತಿಯ ತಾಯಿ, ಒಂದಲ್ಲ ಎರಡಲ್ಲ ಏಳು ಹೆಣ್ಣು ಮೂರು ಗಂಡು ಮಕ್ಕಳು. ಭಿನ್ನವಿಭಿನ್ನ ಪಾತ್ರಗಳಿಂದ ಕೂಡಿರುವ ಬೆಂಗಳೂರಿನ ಆಚಾರ್ರ ಒಂದು ತುಂಬಿದ ಮನೆಯ ಕಥೆ ಇದು. ಆ ಮನೆಮಕ್ಕಳ ಬಾಲ್ಯದ ಕೀಟಲೆ, ಯೌವನದ ಬಯಕೆ, ಬದುಕಿನ ಆಸೆ ಕನಸುಗಳು, ಪರಿಸ್ಥಿತಿ ತಂದೊಡ್ಡುವ ಜವಾಬ್ದಾರಿ ಎಲ್ಲವನ್ನೂ ಕಥಾಹಂದರದಲ್ಲಿ ಅಡಕವಾಗಿಸಿದ್ದಾರೆ. ಶಾಸ್ತ್ರೋಸ್ತ್ರವಾಗಿ ಆಗುತ್ತಿದ್ದ ಅಂದಿನ ಮದುವೆ ಸಮಾರಂಭ, ಶಾಲಾ ಕಾಲೇಜು, ಕಾರುಬಾರು, ಸರ್ಕಾರಿ ಕಚೇರಿ ಕೆಲಸ, ನಾಟಕ ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಗೆ ತರಲಾಗಿದೆ. ಮೊದಲಾರ್ಧದಲ್ಲೆ ಮನೆಯ ಮುಖ್ಯ ಸ್ಥಂಭದಂತಿದ್ದ ಮಧುಸೂದನ್ ಆಚಾರ್ಯರ ಪಾತ್ರ ಅಂತ್ಯವಾಗುತ್ತೆ. ಅಲ್ಲಿಂದಾಚೆಗೆ ಮನೆಯ ಪರಿಸ್ಥಿತಿ ಹೇಗಿರುತ್ತದೆ? ಆ ಮನೆ ಮಕ್ಕಳ ಆಸೆ ಕನಸುಗಳು ಏನಾಗ್ತವೆ? ಅಷ್ಟಕ್ಕೂ ಆ ಪಾತ್ರಗಳ ಆಸೆ ಕನಸುಗಳೇನು ಆನ್ನೋದನ್ನ ಸಿನಿಮಾದ ಟ್ರೈಲರ್‌ನಲ್ಲೆ ತೋರಿಸಿದ್ದಾರೆ.
ಇದನ್ನೂ ಓದಿ: Must Watch Movies: ಕಣ್ಣು ಮಿಟುಕಿಸಲೂ ಬಿಡದ ಸಸ್ಪೆನ್ಸ್ ಥ್ರಿಲ್ಲರ್ ʼಕೀಡಂʼ
ತಿಳಿ ಹಾಸ್ಯದ ಲೇಪನ
ಚಿತ್ರದ ಸಂಭಾಷಣೆ ತಿಳಿಹಾಸ್ಯದಲ್ಲಿ ತೇಲಿಸುತ್ತ ಶುರುವಿನಿಂದ ಕೊನೆಯವರೆಗೂ ಸಮಯಾವಾಗುವುದೇ ತಿಳಿಯುವುದಿಲ್ಲ. ಕ್ವಿಕ್ ಅಂಡ್ ಕ್ಯೂಟ್ ಸ್ಕ್ರೀನ್ ಪ್ಲೇ ಎನ್ನಬಹುದು. ಛಾಯಾಗ್ರಹಣ ಅತ್ಯತ್ತಮವಾಗಿದೆ. ನಟ – ನಟಿಯರೆಲ್ಲ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬರವಣಿಗೆಯ ಹಂತದಲ್ಲೆ ಇನ್ನೂ ತುಸು ಗಟ್ಡಿಯಾಗಿದ್ದರೆ ಚಿತ್ರ ಇನ್ನೂ ಉತ್ತಮವಾಗುತ್ತಿತ್ತು.
ಅಷ್ಟು ಪಾತ್ರಗಳು ಬೇಕಿರಲಿಲ್ಲ, ದೆಹಲಿಗೆ ಹೋಗಿ ಸೆಟಲ್ ಆಗ್ತಿನಿ ಅಂದ ಅಣ್ಣ ಮತ್ತೆ ತಮ್ಮ ತೀರಿಕೊಂಡಾಗಲೂ ಕಾಣದಾಗುವುದು ತುಸು ತರ್ಕಬದ್ಧವಲ್ಲ ಅನಿಸಬಹುದು. ಆದರೆ ಇದೆಲ್ಲವನ್ನೂ ಮೀರಿ ಸಿನಿಮಾ ಇಷ್ಟವಾಗುತ್ತದೆ. ಚಿತ್ರ ಅಂದಿನ ಹೆಣ್ಣಿನ ಸ್ವಾತಂತ್ರ್ಯ, ನಿಸ್ವಾರ್ಥ ಸೇವೆ ಹಾಗೂ ತ್ಯಾಗಗಳನ್ನ ನೆನಪಿಸುತ್ತ ಇದ್ದೂ ಇಲ್ಲದಂತೆ ನಿರ್ಲಕ್ಷ್ಯಕ್ಕೆ ಒಳಪಡುತ್ತಿದ್ದಂತಹ ಸ್ಥಿತಿ, ಓದಿಯೂ ಪ್ರಯೋಜನವಿಲ್ಲದಂತೆ ಕೈ ಕಟ್ಟಿ ಹಾಕುತ್ತಿದ್ದ ಮನಸ್ಥಿತಿಯ ಕುರಿತು ಆಲೋಚಿವಂತೆ ಮಾಡಬಹುದು. ಹೆಚ್ಚು ಓದಿದವರೆಲ್ಲಾ ಒಳ್ಳೆಯವರು ಅಂತ ಅನ್ಕೊಳೊಕಾಗಲ್ಲ, ಓದಿಲ್ಲ ಅಂದಷ್ಟಕ್ಕೆ ಕೆಟ್ಟವರೇನೂ ಅಲ್ಲ ಎನ್ನುವ ಸಂಭಾಷಣೆ ಮನ ಮುಟ್ಟುತ್ತದೆ. ಒಟ್ಟಾರೆಯಾಗಿ ಮೊದಲ ಪ್ರಯತ್ನದಲ್ಲೆ ಸಿಂಧೂ ಶ್ರೀನಿವಾಸಮೂರ್ತಿ ರಚಿಸಿ ನಿರ್ದೇಶನ ಮಾಡಿ ಮುಖ್ಯ ಪಾತ್ರವನ್ನೂ ನಿಭಾಯಿಸಿರುವುದು ಗ್ರೇಟ್. ಮುಂದಿ ದಿನಗಳಲ್ಲಿ ಇವರಿಂದ ಇನ್ನೂ ಉತ್ತಮ ಚಿತ್ರ ನಿರೀಕ್ಷಿಸಬಹುದು.
ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ
ಹೊಸತನ ಇದೆ
ಚೌಕಟ್ಟಿನಾಚೆಗೂ ಮಾತಾಡುವುದಾದರೆ ಇದೊಂದು ಉತ್ತಮ ಚಿತ್ರ. ಸದ್ಯ ಸ್ಯಾಂಡಲ್ ವುಡ್‌ನಿಂದ ಬಾಲಿವುಡ್ ತನಕ ಯಾವುದೋ ಸಮೂಹ ಸನ್ನಿ ಸಕ್ಸೆಸ್ ಸೂತ್ರಕ್ಕೆ ಜೋತು ಬಿದ್ದು ಪ್ಯಾನ್ ಇಂಡಿಯಾ ಎನ್ನುವ ಪ್ರಭಾವಳಿ ಹೊತ್ತು ಕುಣಿಯುತ್ತಿರುವ ಕಾಲದಲ್ಲಿ ಇಂತಹ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಸಿಂಧು ಶ್ರೀನಿವಾಸ್ ಮೂರ್ತಿ ಹಾಗೂ ಸಾಥ್ ನೀಡಿದ ಪಿ ಆರ್ ಕೆ ಪ್ರೊಡಕ್ಷನ್ ಕಾರ್ಯ ಪ್ರಶಂಸನೀಯ. ಆಚಾರ್ & ಕೋ ಕೇವಲ ಸಿನಿಮವಾಗದೆ ಒಂದು ಕಾಲಘಟ್ಟಕ್ಕೆ ಕರೆದೊಯ್ದು ಕತೆ ಹೇಳುತ್ತದೆ. ಸಿನಿಮಾ ಚಿತ್ರಮಂದಿರಗಳಲ್ಲಿದ್ದಾಗ ಈ ಚಿತ್ರದ ಟಿಕೇಟನ್ನ ಟೈಮ್ ಟ್ರಾವೆಲ್ ಟಿಕೇಟ್ ಎನ್ನಬಹುದಿತ್ತು. ಈ ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿ ಈಗ ಅಮೆಜಾನ್ ಫ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.