ಹೈದರಾಬಾದ್: ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ ಸಿನಿಮಾದ ʼನಾಟು ನಾಟುʼ (Naatu Naatu) ಹಾಡು ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಆದರೆ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ಪ್ರೇಮ್ ರಕ್ಷಿತ್ ಶೌಚಾಲಯದಲ್ಲಿ ಕುಳಿತುಕೊಂಡು ಒಂದೂವರೆ ತಾಸುಗಳ ಕಾಲ ಬಿಕ್ಕಿ ಬಿಕ್ಕಿ ಅತ್ತಿದ್ದಾರಂತೆ. ಅದಕ್ಕೆ ಕಾರಣವೇನು ಎನ್ನುವುದನ್ನು ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Naatu Naatu | ‘ನಾಟು ನಾಟು’ ಅಲ್ಲ, ’ನೋ ಟು ನೋ ಟು’; ವಿಶೇಷ ರೀತಿಯಲ್ಲಿ ಎಚ್ಚರಿಕೆ ಕೊಟ್ಟ ಜೈಪುರ ಪೊಲೀಸರು
“ನಾಟು ನಾಟು ಹಾಡು ಅತಿದೊಡ್ಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆ ವಿಚಾರ ನನ್ನ ಕಿವಿಗೆ ಬಿದ್ದಾಕ್ಷಣ ಸಂತೋಷವನ್ನು ತಡೆಯಲಾಗಲಿಲ್ಲ. ಬಾತ್‌ರೂಂ ಒಳಗೆ ಕುಳಿತುಕೊಂಡು ಮನಸ್ಸು ತುಂಬಿ ಅತ್ತಿದ್ದೇನೆ. ಇಂತದ್ದೊಂದು ಸಾಧನೆ ನಮ್ಮಿಂದ ಸಾಧ್ಯವಾದ ಖುಷಿ ಅದಾಗಿತ್ತು. ರಾಜಮೌಳಿ ಅವರು ಇಲ್ಲದಿದ್ದರೆ ಈ ಪ್ರಶಸ್ತಿಯ ಗರಿ ಸಾಧ್ಯವಿಲ್ಲದ ಮಾತಾಗಿತ್ತು. ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ಇಬ್ಬರೂ ಒಳ್ಳೆಯ ನೃತ್ಯಗಾರರು. ಕೀರವಾಣಿ ಅವರು ಹಾಡಿಗೆ ಬೇರೆಯದ್ದೇ ಬೆಲೆಯನ್ನು ತಂದುಕೊಟ್ಟಿದ್ದಾರೆ” ಎಂದು ಹೇಳಿದ್ದಾರೆ.
“ಈ ಹಾಡಿಗೆ ನೃತ್ಯ ಸಂಯೋಜನೆ ಮಾಡುವುದಕ್ಕೆ ನಾವು ಎರಡು ತಿಂಗಳ ಕಾಲಾವಕಾಶ ತೆಗೆದುಕೊಂಡೆವು. ನಮ್ಮ ಸಿಂಹ ಮತ್ತು ಚೀತಾ (ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್) ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣವನ್ನು ಮುಗಿಸಿಕೊಟ್ಟರು. ಒಟ್ಟು 118 ಸ್ಟೆಪ್‌ಗಳನ್ನು ನಟರಿಬ್ಬರೂ ಜತೆಯಾಗಿ ಹಾಕಬೇಕಿತ್ತು. ಇಬ್ಬರೂ ನಟರಿಗೆ ಅವರದ್ದೇ ಆದ ಸ್ಟೈಲ್ ಇದೆ. ಅದನ್ನು ಈ ಎಲ್ಲ ಸ್ಟೆಪ್‌ಗಳಲ್ಲಿ ಮ್ಯಾಚ್ ಮಾಡಿಸುವುದು ನಮ್ಮ ಮುಂದಿದ್ದ ದೊಡ್ಡ ಸವಾಲಾಗಿತ್ತು. ಆದರೆ ಇಬ್ಬರೂ ನಟರು ನಿರ್ದೇಶಕರು ಹೇಳಿದಂತೆ ಅತ್ಯಂತ ಅಚ್ಚುಕಟ್ಟಾಗಿ ನೃತ್ಯ ಕಲಿತು ಮಾಡಿದ್ದಾರೆ” ಎಂದು ಪ್ರೇಮ್ ರಕ್ಷಿತ್ ಹೇಳಿದ್ದಾರೆ.
ಇದನ್ನೂ ಓದಿ: Viral Video | ಹಾಲಿವುಡ್ ಹಾಸ್ಯ ಕಲಾವಿದರಿಂದಲೂ ನಾಟು ನಾಟು ಹಾಡಿಗೆ ಹೆಜ್ಜೆ! ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರಾ