Site icon Vistara News

Sanju Weds Geeta 2 : ಸಂಜು ವೆಡ್ಸ್‌ ಗೀತಾ 2ನಲ್ಲಿ ರಮ್ಯಾ ಇಲ್ಲ; ನಿರ್ದೇಶಕರು ಕೊಟ್ಟ ಕಾರಣ ಹೀಗಿದೆ!

Sanju Weds Geeta 2 movie

ಬೆಂಗಳೂರು: ಕನ್ನಡದಲ್ಲಿ ದೊಡ್ಡ ಯಶಸ್ಸು ಕಂಡ ಸಿನಿಮಾ ʼಸಂಜು ವೆಡ್ಸ್‌ ಗೀತಾʼ. ನಿರ್ದೇಶಕ ನಾಗಶೇಖರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಇದೀಗ ಎರಡನೇ ಭಾಗವಾಗಿ (Sanju Weds Geeta 2) ತೆರೆ ಕಾಣುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ನಾಗಶೇಖರ್‌ ಅವರು ಹಲವಾರು ವಿಚಾರಗಳನ್ನು ವಿಸ್ತಾರ ನ್ಯೂಸ್‌ ಸಿನಿಮಾ ತಂಡದೊಂದಿಗೆ ಹಂಚಿಕೊಂಡಿದ್ದಾರೆ.

ಅಂದ ಹಾಗೆ ʼಸಂಜು ವೆಡ್ಸ್‌ ಗೀತಾʼ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅವರ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಆದರೆ ಸಿನಿಮಾದ ಎರಡನೇ ಭಾಗದಲ್ಲಿ ರಮ್ಯಾ ಇರುವುದೇ ಇಲ್ಲ. ರಮ್ಯಾ ಬದಲಾಗಿ ನಟಿ ರಕ್ಷಿತಾ ರಾಮ್‌ ಅವರನ್ನು ಸಿನಿ ತಂಡ ಆಯ್ಕೆ ಮಾಡಿಕೊಂಡಿದೆ. ಅದಕ್ಕೆ ಕಾರಣವನ್ನು ಕೊಟ್ಟಿರುವ ನಾಗಶೇಖರ್‌ ಅವರು, “ರಮ್ಯಾ ಅವರನ್ನು ಕೇಳಬೇಕು ಎನ್ನುವ ಆಸೆಯಿತ್ತು. ಅವರು ವಿದೇಶದಲ್ಲಿದ್ದಾಗಲೇ ಅವರ ಪರಿಚಯದ ಕೆಲವರ ಬಳಿ ಮಾತನಾಡಿದ್ದೆ. ಆದರೆ ನನ್ನ ಈ ಸಿನಿಮಾ ಎರಡು ಕಥೆಯನ್ನು ಹೊಂದಿದೆ. ಒಂದು ಕಥೆಯನ್ನು ನಾವು ಮುಂಬೈಯಲ್ಲಿ ಚಿತ್ರೀಕರಣ ಮಾಡಿದರೆ ಇನ್ನೊಂದನ್ನು ಸ್ವಿಝರ್ಲೆಂಡ್‌ನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಆ ಎರಡನೇ ಭಾಗದ ಸಮಯದಲ್ಲಿ ಚುನಾವಣೆ ಕೂಡ ಬರುವುದರಿಂದ ರಮ್ಯಾ ಅವರು ಅದರಲ್ಲಿ ಬಿಜಿ ಆಗಿಬಿಡುತ್ತಾರೆ. ಹಾಗಾಗಿ ನಾವು ಅವರನ್ನು ಕೇಳಲು ಹೋಗಲೇ ಇಲ್ಲ” ಎಂದು ಹೇಳಿದ್ದಾರೆ.


ಹಾಗೆಯೇ ಕಳೆದ ಬಾರಿ ಸಂಗೀತ ನಿರ್ದೇಶನ ಮಾಡಿಕೊಟ್ಟಿದ್ದ ಜೆಸ್ಸಿ ಗಿಫ್ಟ್‌ ಅವರನ್ನೂ ಕೂಡ ನಾಗಶೇಖರ್‌ ಅವರು ಈ ಬಾರಿ ಕೈ ಬಿಟ್ಟಿದ್ದಾರೆ. ಅದಕ್ಕೆ ಕಾರಣ ಕೇಳಿದಾಗ ಪ್ರತಿಕ್ರಿಯಿಸಿದ ಅವರು, “ನಮಗೆ ಮುಖ್ಯವಾಗಿ ಸಿನಿಮಾಕ್ಕಾಗಿ ಸಮಯ ಕೊಡುವವರು ಬೇಕು. ಜೆಸ್ಸಿ ಗಿಫ್ಟ್‌ ಅವರು ಸದ್ಯ ತುಂಬಾನೇ ಬಿಜಿ ಇದ್ದಾರೆ. ಹಾಗೆಯೇ ಅರ್ಜುನ್‌ ಜನ್ಯ ಅವರನ್ನು ಕೇಳೋಣ ಎಂದುಕೊಂಡೆವು. ಆದರೆ ಅವರು ಕೂಡ ವಿವಿಧ ಶೋ ಮತ್ತು ಚಿತ್ರ ನಿರ್ದೇಶನದಲ್ಲಿ ಬಿಜಿಯಾಗಿದ್ದಾರೆ. ಅದಕ್ಕಾಗಿ ವಿ ಶ್ರೀಧರ್‌ ಅವರನ್ನು ಆಯ್ಕೆ ಮಾಡಿಕೊಂಡೆವು. ಅವರಿಗೇನು ಕೆಲಸ ಇಲ್ಲ ಅಂದೇನಲ್ಲ. ಆದರೆ ನಮಗೆ ಬೇಕಾದ ಸಮಯವನ್ನು ಅವರು ಕೊಡಲು ಸಿದ್ಧರಿದ್ದರು” ಎಂದು ತಿಳಿಸಿದ್ದಾರೆ.

ಮ್ಯೂಸಿಕ್‌ ಇಲ್ಲದೆ ಸಿನಿಮಾವಿಲ್ಲ

ಅಂದ ಹಾಗೆ ʼಸಂಜು ವೆಡ್ಸ್‌ ಗೀತಾ 2ʼ ಸಿನಿಮಾ ತಯಾರಾಗುವುದಕ್ಕೂ ಮೊದಲು ಅದರ ಸಂಗೀತ ತಯಾರಾಗಿದೆಯಂತೆ. “ಸಿನಿಮಾ ನಿಲ್ಲಬೇಕೆಂದರೆ ಅದಕ್ಕೆ ಮೊದಲು ಅದ್ಭುತವಾದ ಸಂಗೀತವನ್ನು ಕೊಡಬೇಕು. ಅದಕ್ಕಾಗಿಯೇ ನಾವು ಇಷ್ಟು ದಿನ ಕಾದಿದ್ದು. ಒಮ್ಮೆ ಹಾಡು ಇಷ್ಟವಾದ ಮೇಲೆ ಅದನ್ನು ಕಿಟ್ಟಿ ಅವರಿಗೆ ಕೇಳಿಸಿದೆ. ಅವರು ಕೂಡ ಅದನ್ನು ಇಷ್ಟಪಟ್ಟ ನಂತರ ಸಿನಿಮಾ ಕಥೆ ಕಡೆ ಗಮನ ಕೊಟ್ಟೆವು. ಸದ್ಯಕ್ಕೆ ಸಿನಿಮಾದ ಕಥೆ, ಸಂಭಾಷಣೆ, ಸಂಗೀತ ಎಲ್ಲವೂ ಸಿದ್ಧವಿದೆ. ಇದೇ ಆಗಸ್ಟ್‌ 15ಕ್ಕೆ ನಮ್ಮ ʼಸಂಜು ವೆಡ್ಸ್‌ ಗೀತಾ 2ʼ ಸೆಟ್ಟೇರಲಿದೆ. ಹಾಗೆಯೇ ಮುಂದಿನ ವರ್ಷ ಏಪ್ರಿಲ್‌ 1ರಂದು ಸಿನಿಮಾ ತೆರೆ ಕಾಣಲಿದೆ. ನಮ್ಮ ʼಸಂಜು ವೆಡ್ಸ್‌ ಗೀತಾʼ ಕೂಡ ಏಪ್ರಿಲ್‌ 1ರಂದೇ ತೆರೆ ಕಂಡಿತ್ತು” ಎಂದು ನಿರ್ದೇಶಕ ನಾಗಶೇಖರ್‌ ಹೇಳಿದ್ದಾರೆ.


ಮಾಸ್ತಿಗುಡಿ ನಂತರ ಕಾಣೆಯಾಗಿದ್ದೇಕೆ?

ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಇಬ್ಬರು ಪ್ರಮುಖ ನಟರು ಸಾವಿಗೀಡಾಗಿದ್ದರು. ಇದಾದ ನಂತರ ನಾಗಶೇಖರ್‌ ಅವರು ಕಾಣೆಯೇ ಆದರು ಎಂದು ಹೇಳಲಾಗುತ್ತಿತ್ತು. ಆದರೆ ಇದರ ಬಗ್ಗೆಯೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. “ಕಾಣೆಯಾದೆ ಎನ್ನುವುದು ಜನರ ತಪ್ಪು ಕಲ್ಪನೆ. ಮಾಸ್ತಿಗುಡಿ ಆದ ಮೇಲೆ ಅಂಬರೀಶ್‌ ಅವರ ಮಗನನ್ನು ಅಮರ್‌ ಸಿನಿಮಾ ಮೂಲಕ ಲಾಂಚ್‌ ಮಾಡಿದ್ದೇ ನಾನು. ಆದರೆ ಅಂಬರೀಶ್‌ ಅವರು ನಿಧನರಾದ ನಂತರ ಮನಸ್ಸಿಗೆ ನೋವುಂಟಾಯಿತು. ಇಲ್ಲಿ ನನ್ನನ್ನು ಬೆಂಬಲಿಸುವವರು ಯಾರೂ ಇಲ್ಲ ಎನಿಸಿತು. ಹಾಗಾಗಿ ತಮಿಳಿಗೆ ಹೋದೆ. ಅಲ್ಲೊಂದು ಸಿನಿಮಾ ಮಾಡಿದೆ. ತೆಲುಗು ಭಾಷೆಯಲ್ಲೂ ಒಂದು ಸಿನಿಮಾ ಮಾಡಿದೆ. ಇದೀಗ ಮತ್ತೆ ಕನ್ನಡಕ್ಕೆ ವಾಪಸ್‌ ಬರುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಸಂಜು ವೆಡ್ಸ್‌ ಗೀತಾ 2 ಬಗ್ಗೆ ಮಾತು ಮುಂದುವರಿಸಿದ ನಾಗಶೇಖರ್‌ ಅವರು, ಸಿನಿಮಾ ಎರಡು ಕಥೆಗಳನ್ನು ಹೊಂದಿದೆ. ಇಂದಿನ ಕಥೆಯೊಂದಾದರೆ ಹತ್ತು ವರ್ಷ ಹಿಂದಿನ ಕಥೆಯೊಂದು. ಇಂದಿನ ಕಥೆಯಲ್ಲಿ ಕಿಟ್ಟಿ ದೊಡ್ಡ ಶ್ರೀಮಂತನಾಗಿ ಕಾಣಿಸಿಕೊಳ್ಳುತ್ತಾರೆ. ಹತ್ತು ವರ್ಷದ ಹಿಂದಿನ ಕಥೆಯಲ್ಲಿ ಅದರ ವಿರುದ್ಧವಾಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ಪ್ರಕಾಶ್‌ ರಾಜ್‌, ರಮ್ಯ ಕೃಷ್ಣ ಅವರನ್ನು ಕರೆತರುವ ಯೋಜನೆಯಿದೆ. ತಮನ್ನಾ ಅವರನ್ನೂ ಅತಿಥಿ ಪಾತ್ರದಲ್ಲಿ ಕರೆತರಬೇಕೆನ್ನುವ ಮನಸ್ಸಿದೆ. ಅವರಿಗೆ ಸಮಯವಿದ್ದಿದ್ದಾರೆ ಅವರನ್ನು ತರುವುದು ಗ್ಯಾರಂಟಿ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version