ಬೆಂಗಳೂರು: ಜ್ಯೂನಿಯರ್ ಎನ್ ಟಿ ಆರ್ ಸಹೋದರ, ತೆಲುಗು ಚಿತ್ರನಟ ನಂದಮೂರಿ ತಾರಕರತ್ನ (Taraka Ratna) ಅವರಿಗೆ ಜನವರಿ 27ರ ಶುಕ್ರವಾರ ಹೃದಯಾಘಾತವಾಗಿದ್ದು, ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ನಟ ಜ್ಯೂನಿಯರ್ ಎನ್ ಟಿ ಆರ್ ಹಾಗೂ ಕಲ್ಯಾಣ್ ರಾಮ್ ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.
ಸಚಿವ ಡಾ.ಕೆ ಸುಧಾಕರ್ ಬೆಳಗ್ಗೆ 10.30ಕ್ಕೆ ನಾರಾಯಣ ಹೃದಯಾಲಯಕ್ಕೆ ಭೇಟಿ ಕೊಡಲಿದ್ದಾರೆ. ಜ್ಯೂ. ಎನ್ ಟಿ ಆರ್ ಬರುವ ವಿಷಯ ತಿಳಿದು ಆಸ್ಪತ್ರೆ ಬಳಿ ಅಪಾರ ಅಭಿಮಾನಿಗಳು ಜಮಾಯಿಸಿದ್ದಾರೆ. ಹೆಬ್ಬಗೋಡಿ ಪೊಲೀಸರಿಂದ ಆಸ್ಪತ್ರೆ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: Taraka Ratna: ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್: ನಟ ಬಾಲಕೃಷ್ಣ ಹೇಳಿದ್ದೇನು?
ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಈಗಾಗಲೇ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಬೆಂಗಳೂರಿಗೆ ಬಂದು, ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: Taraka Ratna: ನಂದಮೂರಿ ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರ
ಹೆಲ್ತ್ ಬುಲೆಟಿನ್‌ನಲ್ಲಿ ಏನಿದೆ?
ತೀವ್ರ ಹೃದಯಾಘಾತ ಹಿನ್ನೆಲೆಯಲ್ಲಿ ಹೃದಯದ ರಕ್ತ ನಾಳಗಳು ಬ್ಲಾಕ್ ಆಗಿದ್ದು, ತಾರಕರತ್ನ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬ್ಲಾಕ್ ಆಗಿರುವ ರಕ್ತನಾಳಗಳನ್ನು ಸರಿಪಡಿಸಲು ವೈದ್ಯರ ತಂಡ ಪ್ರಯತ್ನಿಸುತ್ತಿದ್ದು, ಇಂಟ್ರಾ-ಅಯೋರ್ಟಿಕ್ ಪಂಪ್ (ABP) ಮತ್ತು ವ್ಯಾಸೋಆ್ಯಕ್ಟಿವ್ ನೆರವಿನಿಂದ ಹೃದಯ ಚಿಕಿತ್ಸೆ ಮಾಡಲಾಗಿದೆ. ಆ್ಯಂಜಿಯೋಪ್ಲ್ಯಾಸ್ಟಿ ಮೂಲಕ ಹಾನಿಗಳಗಾದ ರಕ್ತನಾಳಗಳಿಗೆ ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಕೆ ನಡುವೆಯು ರಕ್ತಸ್ರಾವ ನಿಲ್ಲದೇ ಇರುವ ಕಾರಣ ನಾರಾಯಣ ಹೃದಯಾಲಯ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿಸಿದೆ. ಸದ್ಯ ಎಕ್ಮೊ ನೆರವಿನಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.