Site icon Vistara News

Nandi Award: ಕನ್ನಡಕ್ಕೂ ಬಂತು ತೆಲುಗಿನ ‘ನಂದಿ ಫಿಲ್ಮಂ ಅವಾರ್ಡ್‌’; ಶುಭ ಕೋರಿದ ಸಿಎಂ ಸಿದ್ದರಾಮಯ್ಯ

Nandi Award In Kannada

ಬೆಂಗಳೂರು: ತೆಲುಗು ಸಿನಿಮಾ ರಂಗದಲ್ಲಿ ಅನನ್ಯ ಸೇವೆಗೈದ ಸಾಧಕರಿಗೆ ನೀಡಲಾಗುವ ನಂದಿ ಪ್ರಶಸ್ತಿ (Nandi Award) ಈಗ ಕನ್ನಡದಲ್ಲಿಯೂ ಪ್ರಾರಂಭವಾಗುತ್ತಿದೆ. ಇದೀಗ ನಂದಿ ಅವಾರ್ಡ್ ಲೋಗೊ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಗೊ ಲಾಂಚ್ ಮಾಡಿ ಶುಭ ಕೋರಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ ನೇತೃತ್ವದಲ್ಲಿ ಸೆ.15ರಂದು ಮುಖ್ಯಮಂತ್ರಿ ಲೋಗೊ ಅನಾವರಣ ಮಾಡಿಸಿದ್ದಾರೆ. ಅನಿತಾ ರೆಡ್ಡಿ, ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್, ಭಾಮಾ ಗಿರೀಶ್, ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

`ನಂದಿ ಕನ್ನಡದ ಹೆಮ್ಮೆ’ ಈ ಹೆಸರಿನಲ್ಲಿ ಪ್ರಶಸ್ತಿ ಕೊಡಬೇಕೆಂದು ಸಿನಿಮಾ ರಂಗದ ಸ್ನೇಹಿತರೊಟ್ಟಿಗೆ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ ಎಂದು ಅಧ್ಯಕ್ಷ ಭಾ.ಮಾ ಹರೀಶ್ ತಿಳಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ವಿತರಣೆ ಆಯೋಜನೆ ಮಾಡಲಾಗುತ್ತದೆ. ಪ್ರತಿ ವರ್ಷ ಸಿನಿಮಾ ರಂಗದಲ್ಲಿ ಸಾಧನೆ ಮಾಡಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ನಂದಿ ಪ್ರಶಸ್ತಿ ನೀಡಲಾಗುತ್ತದೆ.

ಸದ್ಯ ನಂದಿ ಪ್ರಶಸ್ತಿ ಲೋಗೊ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಲಾಗುತ್ತದೆ ಎನ್ನಲಾಗಿದೆ. ಸೈಮಾ, ಫಿಲ್ಮಂ ಫೇರ್‌ ಮಾದರಿಯಲ್ಲಿಯೇ ಕನ್ನಡ ಸಿನಿಮಾರಂಗಕ್ಕೆ ಪ್ರತ್ಯೇಕ ಪ್ರಶಸ್ತಿ ನಂದಿ ಎನ್ನುತ್ತಾರೆ ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್.

ಇದನ್ನೂ ಓದಿ: Spy Movie : ಬೆಂಗಳೂರಿನಲ್ಲಿ ನಿಖಿಲ್‌ ಸಿದ್ಧಾರ್ಥ ಅಭಿನಯದ ‘ಸ್ಪೈ’ ಅದ್ಧೂರಿ ಪ್ರಮೋಷನ್

ತೆಲುಗು ಭಾಷೆಯಲ್ಲಿ 1964ರಿಂದ ನಂದಿ ಪ್ರಶಸ್ತಿ ಶುರುವಾಗಿತ್ತು

ಆಂಧ್ರಪ್ರದೇಶ ಸರ್ಕಾರವು 1964ರಿಂದ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಗಳನ್ನು ಗುರುತಿಸಲು ಮತ್ತು ಶ್ಲಾಘಿಸಲು ನಂದಿ ಚಲನಚಿತ್ರ ಪ್ರಶಸ್ತಿಗಳನ್ನು ಕೊಡುತ್ತಿದೆ. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಷಯಗಳನ್ನು ಹೊಂದಿರುವ ತೆಲುಗು ಸಿನಿಮಾಗಳ ನಿರ್ಮಾಣಕ್ಕೆ ಉತ್ತೇಜನ ನೀಡುವುದೇ ಇದರ ಉದ್ದೇಶವಾಗಿದೆ.

ರಾಷ್ಟ್ರೀಯ ಏಕೀಕರಣದ ಕುರಿತಾದ ಚಲನಚಿತ್ರಗಳು, ಮಕ್ಕಳ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಶೈಕ್ಷಣಿಕ ಚಲನಚಿತ್ರಗಳು ಮತ್ತು ತೆಲುಗು ಭಾಷೆಯಲ್ಲಿ ತೆಲುಗು ಸಿನೆಮಾದ ಕುರಿತ ಪುಸ್ತಕಗಳು/ಲೇಖನಗಳ ವಿಭಾಗಗಳಲ್ಲಿ ಅತ್ಯುತ್ತಮ ಚಲನಚಿತ್ರಗಳು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರಿಗೆ ಹೀಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Exit mobile version