ಸಿನಿಮಾ ಕ್ಷೇತ್ರ ಹೊರಗೆ ಎಷ್ಟು ರಂಗು ರಂಗಾಗಿ ಕಾಣುತ್ತದೆಯೋ, ಆ ಚಕ್ರವ್ಯೂಹದ ಒಳಗೆ ಅಷ್ಟೇ ಅಡೆತಡೆ ಎದುರಾಗುತ್ತವೆ. ಹೀಗೆ ಕನ್ನಡ ಸಿನಿ ಕ್ಷೇತ್ರದಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ನಟ ಒಂದೇ ಒಂದು ಬ್ರೇಕ್ಗಾಗಿ ವೃದ್ಧಾಪ್ಯದ ತನಕ ಕಾಯಬೇಕಾಗಿ ಬಂತು. ನಾವು ಹೇಳುತ್ತಿರುವುದು ‘ಕೆಜಿಎಫ್’ ತಾತ ಎಂದೇ ಪ್ರಸಿದ್ಧ ಪಡೆದಿರುವ ಕೃಷ್ಣ ಜಿ. ರಾವ್ರ (Nano Narayanappa) ಕುರಿತು. 4 ದಶಕಗಳಿಂದ ಕನ್ನಡ ಕಲಾಸೇವೆಯನ್ನ ಮಾಡಿದ್ದ ಕೃಷ್ಣ ಜಿ. ರಾವ್ ಅವರಿಗೆ ಕಡೆಗೂ ಹೀರೋ ಪಟ್ಟ ಸಿಕ್ಕಿದೆ.
‘ಕೆಜಿಎಫ್-1’ ರಿಲೀಸ್ ಆದ ಮರುದಿನವೇ ಕೃಷ್ಣ ಜಿ. ರಾವ್ ಸಿನಿ ಜೀವನ ದೊಡ್ಡ ತಿರುವು ಪಡೆದುಕೊಂಡಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ಈ ಹಿರಿಯ ನಟ ಮಗ್ನರಾದರು. ಆದರೆ ಕೃಷ್ಣ ಜಿ. ರಾವ್ ಮುಖ್ಯಪಾತ್ರ ನಿರ್ವಹಿಸಿದ ಅಥವಾ ನಾಯಕನ ಪಾತ್ರ ವಹಿಸಿಕೊಂಡ ಸಿನಿಮಾಗಳು ಇನ್ನೂ ರಿಲೀಸ್ ಆಗಿಲ್ಲ. ಹೀಗಾಗಿ ಈ ಕೊರತೆಯನ್ನು ನೀಗಿಸೋದಕ್ಕೆ ‘ನ್ಯಾನೋ ನಾರಾಯಣಪ್ಪ’ ಸಿನಿಮಾ ಬಂದಿದೆ. ಈ ಚಿತ್ರದಲ್ಲಿ ಕೃಷ್ಣ ಜಿ. ರಾವ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: KGF | ತಮಿಳಿನಲ್ಲಿ ಬರುತ್ತಿದೆ ರಿಯಲ್ ಕೆಜಿಎಫ್: ಹೀರೋ ಯಶ್ ಅಲ್ಲ!
ಕಾಮಿಡಿ ಕಿಕ್
‘ನ್ಯಾನೋ ನಾರಾಯಣಪ್ಪ’ ಸಿನಿಮಾದ ಟ್ರೈಲರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮತ್ತು ‘ಕ್ರಿಟಿಕಲ್ ಕೀರ್ತನೆಗಳು’ ಮೂಲಕ ಭರವಸೆ ಮೂಡಿಸಿರುವ ಕುಮಾರ್ & ಟೀಂ ಇದೀಗ ಮತ್ತೊಮ್ಮೆ ಒಗ್ಗೂಡಿದೆ. ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ನ್ಯಾನೋ ನಾರಾಯಣಪ್ಪ’ ಗಮನ ಸೆಳೆದಿದೆ. ಫಸ್ಟ್ ಲುಕ್ ಮತ್ತು ಟೈಟಲ್ ಮೂಲಕ ಮೋಡಿ ಮಾಡಿದ್ದ ಚಿತ್ರತಂಡ ಈಗ ಟ್ರೈಲರ್ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಹಾಸ್ಯ + ಭಾವುಕತೆ
‘ಕೆಜಿಎಫ್-1’ ಹಾಗೂ ‘ಕೆಜಿಎಫ್-2’ನಲ್ಲಿ ಪುಟ್ಟ ಪಾತ್ರದ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ಕೃಷ್ಣಾ ಜಿ. ರಾವ್ ಅವರು ಇಲ್ಲಿ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ಡೈರೆಕ್ಟರ್ ಕುಮಾರ್ ತಮ್ಮ ಹಿಂದಿನ ಸಿನಿಮಾಗಳಂತೆ ಇಲ್ಲೂ ಹಾಸ್ಯವನ್ನ ಮೂಲ ಮಂತ್ರವಾಗಿಸಿ ಮೋಡಿ ಮಾಡುವ ಮುನ್ಸೂಚನೆ ನೀಡಿದ್ದಾರೆ. ಆದರೆ ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿವೆ ಎಂಬುದು ಟ್ರೈಲರ್ನಲ್ಲೇ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಅಷ್ಟಕ್ಕೂ ‘ನ್ಯಾನೋ ನಾರಾಯಣಪ್ಪ’ ಸಿನಿಮಾಗೆ ಕತೆ ಬರೆದು, ನಿರ್ದೇಶನವನ್ನೂ ಮಾಡುವ ಜೊತೆಗೆ ನಿರ್ಮಾಣಕ್ಕೂ ಕೈಹಾಕಿದ್ದಾರೆ ಕುಮಾರ್. ಕಾಮಿಡಿ, ಎಮೋಷನಲ್ ಸಿನಿಮಾ ಇದಾಗಿದ್ದು, ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಬಹುದಾದ ಸಬ್ಜೆಕ್ಟ್ ಎನ್ನುತ್ತಿದೆ ಚಿತ್ರತಂಡ. ಶಿವಶಂಕರ್ ಕ್ಯಾಮೆರಾ ವರ್ಕ್, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಕಾಕ್ರೋಚ್ ಸುಧಿ, ಪ್ರಶಾಂತ್ ಸಿದ್ದಿ, ಅಕ್ಷತಾ ಕುಕ್ಕಿ ಮತ್ತಿತರರು ಸಿನಿಮಾದ ತಾರಾ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: Avatar Re Release | ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್ -1’