ಮುಂಬೈ: ಮೊದಲ ಸಂಬಳ ಎಲ್ಲರಿಗೂ ನೆನಪಿನಲ್ಲಿ ಉಳಿಯುವಂಥದ್ದು. ಅದು ಎಷ್ಟೇ ಕಡಿಮೆಯೇ ಆದರೂ ಅದರಲ್ಲಿ ರಾಶಿ ನೆನಪುಗಳು ಸೃಷ್ಟಿಯಾಗುವುದಂತೂ ಸತ್ಯ. ಅದೇ ರೀತಿ ಬಾಲಿವುಡ್ನ ಹಿರಿಯ ನಟರಾದ ನಾಸೀರುದ್ದೀನ್ ಶಾ (Naseeruddin Shah Birthday) ಕೂಡ ತಮ್ಮ ಮೊದಲನೇ ಸಂಬಳವನ್ನು ನೆನಪಿಸಿಕೊಂಡಿದ್ದಾರೆ.
ನಾಸೀರುದ್ದೀನ್ ಶಾ ಅವರು ನಮಗೆ ತೆರೆ ಮೇಲೆ ಮೊದಲಾಗಿ ಕಾಣಿಸಿಕೊಂಡಿದ್ದು 1975ರ ʼನಿಶಾಂತ್ʼ ಸಿನಿಮಾ ಮೂಲಕ. ಆದರೆ ಅದಕ್ಕೂ ಮೊದಲು ಅವರು 1967ರಲ್ಲಿ ʼಅಮನ್ʼ ಸಿನಿಮಾದಲ್ಲಿಯೂ ನಟಿಸಿದ್ದರಂತೆ. ಆ ಸಿನಿಮಾದಲ್ಲಿ ನಟ ರಾಜೇಂದ್ರ ಕುಮಾರ್ ಅವರನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವಾಗ ಶವದ ಜತೆ ಹೋಗುವವರಲ್ಲಿ ಇವರೂ ಒಬ್ಬರಾಗಿದ್ದರಂತೆ. ಆ ಕೆಲಸಕ್ಕೆ ಅವರಿಗೆ ಏಳೂವರೆ ರೂಪಾಯಿಯನ್ನು ಸಂಬಳವಾಗಿ ಕೊಡಲಾಗಿತ್ತಂತೆ. ಆ ಹಣ ತಮಗೆ ಎರಡು ವಾರಗಳ ಖರ್ಚಿಗಾಗಿತ್ತು ಎಂದು ನಾಸೀರುದ್ದೀನ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Viral Video : ಅಪ್ಪ ನಾನೀಗ ಡಾಕ್ಟರ್ ಎಂದ ಮಗಳು! ಭಾವುಕರಾದ ತಂದೆ!
ನಟನೆಗೆ ಕಾಲಿಟ್ಟ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದ ಅವರು, “ನಾನು ಶಾಲೆಯಲ್ಲಿದ್ದಾಗ ಅನೇಕ ನಾಟಕಗಳನ್ನು ಮಾಡುತ್ತಿದ್ದೆ. ಎಲ್ಲ ಮಕ್ಕಳಿಗಿಂತ ಚೆನ್ನಾಗಿ ನಾನು ನಟನೆ ಮಾಡಬಲ್ಲೆ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು. ಆದರೆ ಓದುವುದರಲ್ಲಿ ಫೇಲ್ ಆದಾಗ ನನ್ನ ತಂದೆ ನನ್ನನ್ನು ಬೇರೆ ಶಾಲೆಗೆ ಸೇರಿಸಿದರು. ಅಲ್ಲಿ ನಾಲ್ವರು ಸ್ನೇಹಿತರೊಂದಿಗೆ ಸೇರಿಕೊಂಡು ನಾನು ʼದಿ ಮರ್ಚೆಂಟ್ ಆಫ್ ವೆನಿಸ್ʼ ನಾಟಕವನ್ನು ಮಾಡಿದೆ. 14ನೇ ವಯಸ್ಸಿನಲ್ಲಿದ್ದಾಗಲೇ ನನಗೆ ನಾನು ನಟನೆಯಲ್ಲೇ ಮುಂದುವರಿಯಬೇಕು ಎನ್ನುವುದು ನಿಸ್ಸಂದೇಹವಾಗಿ ಗೊತ್ತಿತ್ತು. ನಂತರ ನನ್ನ ವಿದ್ಯಾಭ್ಯಾಸವೂ ಚೆನ್ನಾಗಿ ಆಯಿತು. ನಾನು ಕ್ರಿಕೆಟ್ ಕೂಡ ಆಡಲಾರಂಭಿಸಿದೆ. ನಂತರ ನನ್ನ ಜೀವನವೇ ಬದಲಾಯಿತು” ಎಂದು ಹೇಳಿಕೊಂಡಿದ್ದರು.
ನಾಸಿರುದ್ದೀನ್ ಅವರು ಹುಟ್ಟಿ ಇಂದಿಗೆ (ಜುಲೈ 20) 73 ವರ್ಷಗಳು ತುಂಬಿವೆ. 16ನೇ ವಯಸ್ಸಿನಿಂದಲೇ ಚಿತ್ರೋದ್ಯಮಕ್ಕೆ ಬಂದ ಅವರು ನೂರಾರು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ನಾಸಿರುದ್ದೀನ್ ಅವರು ಕೊನೆಯದಾಗಿ ತಾಜ್: ರೀನ್ ಆಫ್ ರಿವೆಂಜ್ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದರು. ಆ ಸೀರಿಸ್ನಲ್ಲಿ ಅದಿತಿ ರಾವ್ ಹೈದರಿ, ರಾಹುಲ್ ಬೋಸ್, ಸಂಧ್ಯಾ ಮೃದುಲ್ ಮತ್ತು ಜರೀನಾ ವಹಾಬ್ ಕೂಡ ನಟಿಸಿದ್ದರು. ಈ ಸಿನಿಮಾದ ಈ ವರ್ಷ ಮೇ 12ರಂದು ತೆರೆ ಕಂಡಿತ್ತು.