ತಿರುವನಂತಪುರಂ: ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿ ಹಲವಾರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ಇದೀಗ ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ವಿವಾದಕ್ಕೆ ಸಿಲುಕಿಕೊಂಡಿದೆ. ಮಲಯಾಳಂ ಭಾಷೆಯಲ್ಲಿ ಸಿದ್ಧವಾಗಿರುವ ನೆರ್ಚಪೆಟ್ಟಿ ಸಿನಿಮಾದ (Nerchapetti Movie) ಬಗ್ಗೆ ಕೇರಳದ ಹಲವರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.
ಕ್ರೈಸ್ತ ಸನ್ಯಾಸಿನಿಯ ಪ್ರೇಮಕಥೆಯ ಸುತ್ತ ಹೆಣೆಯಲಾಗಿರುವ ಕಥೆಯಾದ ನೆರ್ಚಪಟ್ಟಿ ಸಿನಿಮಾ ಜುಲೈ ಎರಡನೇ ವಾರದಲ್ಲಿ ತೆರೆಗೆ ಬರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇರಳದ ಹಲವೆಡೆ ಸಿನಿಮಾದ ಬ್ಯಾನರ್‌ಗಳನ್ನು ಹಾಕಲಾಗಿದೆ. ಕ್ರೈಸ್ತ ಸನ್ಯಾಸಿನಿಯ ಪ್ರೇಮ ಕಥೆಯನ್ನು ತೆರೆ ಮೇಲೆ ತೋರಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದೆ. ಇದೇ ಕಾರಣಕ್ಕೆ ಇದರ ಬಗ್ಗೆ ವಿರೋಧವೂ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Video Viral : ಪರಸ್ತ್ರೀ ಜತೆ ಅಪ್ಪನ ಸರಸ; ವಿಡಿಯೊ ವೈರಲ್‌ನಿಂದ ಮುಜುಗರಗೊಂಡು ಮಗ ಆತ್ಮಹತ್ಯೆ
ಈ ಹಿಂದೆ ಸಿನಿಮಾ ಚಿತ್ರೀಕರಣ ವೇಳೆಯೂ ಸಮಸ್ಯೆ ಎದುರಾಗಿತ್ತು. ಕೆಲವರು ಚಿತ್ರೀಕರಣ ಸ್ಥಳಕ್ಕೆ ಬಂದು ತಕರಾರು ಎತ್ತಿದ್ದರು. ಆಗ ಸಿನಿ ತಂಡ ಪೊಲೀಸರು ಮೊರೆ ಹೋಗಿ ಸಮಸ್ಯೆಯಿಂದ ಪಾರಾಗಿತ್ತು. ಇದೀಗ ಸಿನಿಮಾ ತೆರೆಗೆ ಬರಲು ಸಜ್ಜಾಗಿರುವ ಸಮಯದಲ್ಲಿಯೂ ಮತ್ತೆ ವಿವಾದ ಹುಟ್ಟಿಕೊಂಡಿದೆ. ಕಣ್ಣೂರು ಮತ್ತು ಇರಿಟಿ ಪ್ರದೇಶದಲ್ಲಿ ಜನರು ಸಿನಿಮಾದ ಪೋಸ್ಟರ್ ಅನ್ನು ಹರಿದು ಹಾಕಿದ್ದಾರೆ. ಸಿನಿಮಾ ಬಿಡುಗಡೆ ಆಗಬಾರದು ಎಂದು ಜನರು ಸಿಟ್ಟನ್ನು ಹೊರಹಾಕುತ್ತಿದ್ದಾರೆ.
ಈ ಸಿನಿಮಾವನ್ನು ಬಾಬು ಜಾನ್ ಕೊಕ್ಕವಯಲ್ ಅವರು ಬರೆದು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನೈರಾ ನಿಹಾರ್ ಅವರು ನಾಯಕ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ರಾಯಲ್ ಎನ್‌ಫೀಲ್ಡ್ ಮತ್ತು ಅದಾನಿ ಗ್ರೂಪ್‌ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅತುಲ್ ಸುರೇಶ್ ಅವರು ನಾಯಕ ನಟನಾಗಿದ್ದಾರೆ. ಸ್ಕೈಗೇಟ್ ಫಿಲಂಸ್ ಮತ್ತು ಉಜ್ಜೈನಿ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಚಿತ್ರಕ್ಕೆ ಸುನಿಲ್ ಪುಲ್ಲೋಡೆ ಚಿತ್ರಕಥೆ ಬರೆದಿದ್ದು, ರಫೀಕ್ ರಶೀದ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಂಕಲನವನ್ನು ಸಿಂಟೋ ಡೇವಿಡ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಿಬು ಸುಕುಮಾರನ್ ಮತ್ತು ಸಿಬಿಚನ್ ಇರಿಟ್ಟಿ ಸಂಗೀತ ನೀಡಿದ್ದಾರೆ.