ಮನರಂಜನಾ ಕ್ಷೇತ್ರದ ಸಾಧಕರಿಗಾಗಿ ಹಾಲಿವುಡ್ ವಾಕ್ ಆಫ್ ಫೇಮ್ನಿಂದ ನೀಡಲಾಗುವ ‘ಸ್ಟಾರ್’ ಗೌರವಕ್ಕೆ ಸೋಮವಾರ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಮತ್ತು ಅವರ ಸಹೋದರರಾದ ಕೆವಿನ್, ಜೋ ಪಾತ್ರರಾಗಿದ್ದಾರೆ. ಜನವರಿ 30ರಂದು ಹಾಲಿವುಡ್ ವಾಕ್ ಆಫ್ ಫೇಮ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಖ್ಯಾತ ಸಂಗೀತಗಾರರಾದ ನಿಕ್ ಜೋನಸ್, ಕೆವಿನ್ ಜೋನಸ್ ಮತ್ತು ಜೋ ಜೋನಸ್ ತಮ್ಮ ಕುಟುಂಬ ಸಮೇತ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿಯೇ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪುತ್ರಿ ಮಾಲತಿ ಮೇರಿ ಮುಖವೂ ಕಾಣಿಸಿದೆ. ಇಂದು ಬೆಳಗ್ಗೆಯಿಂದಲೂ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪುತ್ರಿಯನ್ನು ಎತ್ತಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಪ್ಯಾಂಟ್ಶರ್ಟ್ನಲ್ಲಿ ಮಿಂಚಿದರೆ, ನಿಕ್ ಜೋನಸ್ ಅವರು ಕ್ರೀಮ್ ಬಣ್ಣದ ಸೂಟ್ ಧರಿಸಿದ್ದರು. ಹಾಗೇ, ಮಗಳು ಮಾಲತಿ ಕೂಡ ಅದೇ ಬಣ್ಣದ ಡ್ರೆಸ್ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಳು. ಕಳೆದ ವರ್ಷ ಜನವರಿ ತಿಂಗಳಲ್ಲಿ ಜನಿಸಿದ ಮಾಲತಿ ಮೇರಿ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇದುವರೆಗೆ ಬಹಿರಂಗ ಮಾಡಿರಲಿಲ್ಲ. ಈಗಾಗಲೇ ಹಲವು ಬಾರಿ ಸೋಷಿಯಲ್ ಮೀಡಿಯಾಗಳಲ್ಲಿ ಮಗಳು ಜತೆಗೇ ಇರುವ ಫೋಟೋ ಹಾಕಿದ್ದರೂ, ಪುತ್ರಿಯ ಮುಖಕ್ಕೆ ಇಮೋಜಿ ಹಾಕುತ್ತಿದ್ದರು. ಆಕೆಯನ್ನು ಸಾರ್ವಜನಿಕ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆದರೆ ಈ ಬಾರಿ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ.