ಬೆಂಗಳೂರು: ಆ್ಯಕ್ಷನ್, ಫೈಟ್, ಸ್ಟೈಲಿಷ್, ರೊಮ್ಯಾಂಟಿಕ್, ಕಾಮಿಡಿ.. ಹೀಗೆ ಸಿನಿಮಾದ ಬಹು ಆಯಾಮಗಳಲ್ಲಿ ಮಿಂಚಬಲ್ಲ ಪ್ರತಿಭೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy). ರಾಜಕಾರಣಕ್ಕಾಗಿ ಸಿನಿಮಾದಿಂದ ಬ್ರೇಕ್ ಪಡೆದಿದ್ದ ನಿಖಿಲ್ ಇದೀಗ ಭರ್ಜರಿಯಾಗಿ ರೀ ಎಂಟ್ರಿ ಪಡೆಯುತ್ತಿದ್ದಾರೆ. ದಕ್ಷಿಣದ ಭಾರತದ ಅತಿ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯ ಪ್ಯಾನ್ ಇಂಡಿಯಾ ಸಿನಿಮಾದ (Pan India Cinema) ಮೂಲಕ ಮರಳಿ ತೆರೆ ಏರುತ್ತಿರುವ ಅವರಿಗೆ ಇದು ಚಿತ್ರ ಜೀವನದ ಮಹತ್ವದ ಬ್ರೇಕ್ ಆಗಲಿದೆ.
ಜಾಗ್ವಾರ್ (Jaguar), ಸೀತಾರಾಮ ಕಲ್ಯಾಣ (Seetharama Kalyana), ರೈಡರ್ (Rider), ಕುರುಕ್ಷೇತ್ರ (Kurukshetra) ಸಿನಿಮಾಗಳ ಮೂಲಕ ಯುವ ಸಮೂಹದಲ್ಲಿ ಹವಾ ಎಬ್ಬಿಸಿದ್ದರು ನಿಖಿಲ್ ಕುಮಾರಸ್ವಾಮಿ. ಯುವ ಜನತೆಯನ್ನು ಬಡಿದೆಬ್ಬಿಸಬಲ್ಲ ಖಡಕ್ ಲುಕ್, ಹುಡುಗಿಯರಿಗೆ ಪ್ರಿಯವಾಗುವ ಆತ್ಮೀಯ ನೋಟಗಳು, ಕಾಮಿಡಿ ಟೈಮಿಂಗ್ ಎಲ್ಲವೂ ಪ್ಲಸ್ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾಗಳ ಬಗ್ಗೆ ಒಳ್ಳೆಯ ಟಾಕ್ ಇದೆ.
ಸೀತಾರಾಮ ಕಲ್ಯಾಣದ ನಂತರ ಅವರು ಯದುವೀರ್ ಮತ್ತು ಧನುಷ್ ಸಿನಿಮಾಗಳಲ್ಲಿ ನಟಿಸುವ ಮಾತು ಕೇಳಿಬಂದಿತ್ತು. ಆದರೆ, ಪಕ್ಷ ಸಂಘಟನೆ, ಚುನಾವಣೆಗಳಲ್ಲಿ ಬ್ಯುಸಿಯಾಗಬೇಕಾದ ಕಾರಣದಿಂದ ಪ್ರಾಜೆಕ್ಟ್ ನಿಂತಲ್ಲೇ ನಿಂತು ಹೋಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಇನ್ನು ಸಿನಿಮಾದಲ್ಲಿ ಸಕ್ರಿಯವಾಗಲು ಅವರು ತೀರ್ಮಾನಿಸಿದ್ದರು.
ಈಗ ಸಿಕ್ಕಿದೆ ನಿರ್ಣಾಯಕ ಬ್ರೇಕ್!
ಸಿನಿಮಾ ಮತ್ತು ರಾಜಕಾರಣದ ನಡುವೆ ಜೀಕುತ್ತಿದ್ದ ಬದುಕಿಗೆ ಬ್ರೇಕ್ ಹಾಕಿ ಸಿನಿಮಾ ರಂಗದಲ್ಲೇ ಹೆಚ್ಚು ತೊಡಗಿಸಿಕೊಳ್ಳಲು ಮುಂದಾಗಿರುವ ನಿಖಿಲ್‌ಗೆ ಜೀವಮಾನದ ಅತಿ ದೊಡ್ಡ ಅವಕಾಶ ಈಗ ಸಿಕ್ಕಿದೆ. ದಕ್ಷಿಣ ಭಾರತದ ಅತಿದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಮೊದಲ ಕನ್ನಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ನಾಯಕನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದೆ. ಇದು ಕನ್ನಡದ ಮೂಲ ಸಿನಿಮಾವಾಗಿ ಪಂಚ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.
ನಿಖಿಲ್ ಅವರನ್ನು ಲೈಕ್ ಮಾಡಿದ ಲೈಕಾ
ನೀವು ತಮಿಳಿನ ಸೂಪರ್ ಹಿಟ್ ಬಿಗ್ ಬಜೆಟ್ ಸಿನಿಮಾಗಳಾದ ಪೊನ್ನಿಯಿನ್ ಸೆಲ್ವನ್ 1, ಪೊನ್ನಿಯಿನ್ ಸೆಲ್ವನ್ 2, ಕತ್ತಿ, 2.0, ವಡಾ ಚೆನ್ನೈ, ದರ್ಬಾರ್, ಡಾನ್ ಸಿನಿಮಾಗಳನ್ನು ಕೇಳಿದ್ದರೆ, ಅದರ ಹಿಂದಿರುವ ನಿರ್ಮಾಣ ಸಂಸ್ಥೆಯ ಹೆಸರನ್ನೂ ತಿಳಿದಿರುತ್ತೀರಿ. ಅದುವೇ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ (LYCA Productions). ಇದೀಗ ಲೈಕಾ ಪ್ರೊಡಕ್ಷನ್ಸ್ ನಿಖಿಲ್ ಕುಮಾರಸ್ವಾಮಿ ಅವರ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದೆ ಬಂದಿದೆ.
ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ2, ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ ಲೈಕಾ ಸಂಸ್ಥೆ. ಕಮಲ್ ಹಾಸನ್ , ವಿಕ್ರಂ, ಅಜಿತ್, ರಜಿನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕುವ ಬೃಹತ್ ಸಂಸ್ಥೆ ಇದೀಗ ನಿಖಿಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದೆ.
ಲೈಕಾ ಪ್ರೊಡಕ್ಷನ್ ಎಂದರೆ ಬಜೆಟ್ ಮಾತ್ರವಲ್ಲ, ಅತ್ಯಂತ ಪವರ್ ಫುಲ್ ಕಥೆಯನ್ನು ಸೃಷ್ಟಿಸುತ್ತದೆ. ಪೊನ್ನಿಸೆಲ್ವನ್ ನೋಡಿದ್ದರೆ ಅದರ ಮೇಕಿಂಗ್‌ನ ಅದ್ಧೂರಿತನವನ್ನು ಗಮನಿಸಿರುತ್ತೀರಿ. ಇಂಥ ದೊಡ್ಡ ಸಂಸ್ಥೆಯೊಂದು ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಕೊಟ್ಟಿದೆ.
ಆಗಸ್ಟ್ 23ರಂದು ನಿಖಿಲ್ ಕುಮಾರಸ್ವಾಮಿಯ ಜೀವನದ ಅತ್ಯಂತ ಮಹತ್ವದ ಸಿನಿಮಾ ಸೆಟ್ಟೇರಲಿದೆ. ಇದರ ನಾಯಕಿ ಯಾರು, ನಿರ್ದೇಶಕರು ಯಾರು ಎನ್ನುವುದು ಇನ್ನೂ ರಿವೀಲ್ ಆಗಿಲ್ಲ. ಅಂತೂ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯದಲ್ಲಿ ಅದೃಷ್ಟ ಕೂಡಿಬರದೆ ಇದ್ದರೂ ಸಿನಿಮಾ ರಂಗದಲ್ಲಿ ಗೆಲ್ಲುವ ಅತಿ ದೊಡ್ಡ ಅವಕಾಶವೊಂದು ಎದುರುಬಂದು ನಿಂತಿರುವುದು ಸ್ಪಷ್ಟ.