ಹಾಸನ: ಹಲವಾರು ಕನ್ನಡ ಸಿನಿಮಾ ಹಾಗೂ ಗೀತಾ ಸೇರಿದಂತೆ (Geetha serial) ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟ ನಿನಾಸಂ ಅಶ್ವತ್ಥ್ (Ninasam Ashwath) ವಿರುದ್ಧ ಇದೀಗ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಚೆಕ್ ಬೌನ್ಸ್ ವಿಚಾರದಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಬಳಿಕ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡು ಶೇ.25ರಷ್ಟು ಹಣ ಪಾವತಿಸಿ ಬಿಡುಗಡೆಯಾಗಿದ್ದಾರೆ. ಈ ಹಿಂದೆ ಕೂಡ ಅವಾಚ್ಯ ಶಬ್ದಗಳಿಂದ ನಿಂದನೆ, ಮಾನನಷ್ಟ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ಈ ನಟನ ವಿರುದ್ಧ ದಾಖಲಾಗಿದ್ದವು.
ಹಾಸನ ಮೂಲದ ರೋಹಿತ್ ಎಂಬುವರಿಂದ ನಟ ನೀನಾಸಂ ಅಶ್ವತ್ಥ ಹಸುಗಳನ್ನು ಖರೀದಿ ಮಾಡಿ 1.5 ಲಕ್ಷ ರೂ. ಚೆಕ್ ನೀಡಿದ್ದರು. ಬ್ಯಾಂಕ್‌ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಹಾಸನದ ಜೆಎಮ್‌ಎಫ್‌ಸಿ ಕೋರ್ಟ್‌ನಲ್ಲಿ ರೋಹಿತ್ ಕೇಸ್ ದಾಖಲಿಸಿದ್ದರು. ನಾಲ್ಕು ಬಾರಿ ಅರೆಸ್ಟ್ ವಾರಂಟ್ ಅನ್ನು ಕೋರ್ಟ್ ಹೊರಡಿಸಿತ್ತು. ನಾಲ್ಕೂ ಬಾರಿಯೂ ಕೋರ್ಟ್‌ಗೆ ನಟ ನೀನಾಸಂ ಅಶ್ವತ್ಥ ಹಾಜಾರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಐದನೇ ಬಾರಿ ಅರೆಸ್ಟ್ ವಾರಂಟ್ ಹೊರಡಿಸಿದರೂ ಹಾಜರಾಗದ ಕಾರಣ ಹಾಸನ ಬಡಾವಣೆ ಠಾಣೆ ಪೊಲೀಸರು ಜುಲೈ 8ರಂದು ರಾತ್ರಿ ನಟನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ನಟ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡು ಬಿಡುಗಡೆ ಪಡೆದಿದ್ದಾರೆ. ಮುಂದೆ ಉಳಿದ ಹಣ ನೀಡುವುದಾಗಿ ನ್ಯಾಯಾಧೀಶರಿಂದ ಸಮಯ ಪಡೆದಿದ್ದಾರೆ.
ಇದನ್ನೂ ಓದಿ: Cheque bounce : ಚೆಕ್ ಬೌನ್ಸ್ ಕೇಸ್; ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ
ಈ ಹಿಂದೆಯೂ ನೀನಾಸಂ ಅಶ್ವತ್ಥ್ ವಿರುದ್ಧ ಕೆಲವು ಆರೋಪಗಳು ಕೇಳಿಬಂದಿದ್ದವು. 2018ರಲ್ಲಿ ಸ್ನೇಹಿತನಿಗೆ 18 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ‘ಗೀತಾ’ ಧಾರಾವಾಹಿಯಲ್ಲಿ ಇವರು ನಟಿಸಿ ಖ್ಯಾತಿ ಗಳಿಸಿದ್ದಾರೆ. ಪ್ರೇಮಿಸಂ, ಶಿಕಾರಿ, ಗೂಗ್ಲಿ, ರಾಜ ರಾಜೇಂದ್ರ, ಮುಂಗಾರು ಮಳೆ ಮುಂತಾದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.