ಬೆಂಗಳೂರು: ಮಾಸ್ಟರ್ ಆನಂದ್ (Master anadh) ಮಗಳ ಹೆಸರು ಬಳಸಿ ಜನರಿಗೆ ವಂಚನೆ (Fraud Case) ಮಾಡುತ್ತಿರುವ ಆರೋಪ ಎದುರಿಸುತ್ತಿರುವ ನಿಶಾ ನರಸಪ್ಪ (Nisha narasapa) ಜಾಲ ಬೆಳೆಯುತ್ತಲೇ ಇದೆ. ವಂಚನೆಯ ಆರೋಪ ಎದುರಿಸುತ್ತಿರುವ ಮಾಡೆಲ್ (Model) ನಿಶಾ ನರಸಪ್ಪ 2 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ನಟಿ ಮಾಳವಿಕಾ ಅವಿನಾಶ್ (malavika avinash) ಯಾರದೇ ಹೆಸರು ಬಳಸದೇ ಪರೋಕ್ಷವಾಗಿ ಪೋಷಕರಿಗೆ ಕಿವಿಮಾತನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ.
ನಟನೆಗೆ ಸ್ಟಾಪ್ ಇಡಬೇಕು
ಮಾಳವಿಕ ತಮ್ಮ ಪೋಸ್ಟ್‌ನಲ್ಲಿ ʻʻನಾನೂ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿದ್ದೆ. ಆ ಸಮಯದಲ್ಲಿ ಹಲವರು ಬಾಲ ಕಲಾವಿದರಿದ್ದರು. ಪೋಷಕರು ಮಕ್ಕಳಿಗೆ ನಟನೆಯನ್ನು ಯಾವಾಗ ನಿಲ್ಲಿಸಬೇಕು ಎಂದು ತಿಳಿದಿರಬೇಕು. ಮಗು ತನ್ನನ್ನು ತಾನು ಸ್ಟಾರ್ ಎಂದು ಆಲೋಚಿಸುವ ಮುನ್ನ ಪೋಷಕರು ಅಷ್ಟರಲ್ಲಿ ಗಮನಿಸಿ ಅವರ ನಟನೆಗೆ ಸ್ಟಾಪ್ ಇಡಬೇಕು. ಮಗು ಗಳಿಸುವ ಸ್ಟಾರ್ ಡಮ್ ಹಾಗು ಹಣದಿಂದ ಪೋಷಕರು ಮೈಮರೆಯಬಾರದು. ಅದೃಷ್ಟವಶಾತ್ ನಾನು ಬಾಲನಟಿಯಾಗಿ ಯಶಸ್ವಿ ಆಗಲಿಲ್ಲ. ಹೀಗಾಗಿ ಪ್ರಾಪ್ತ ವಯಸ್ಕಳಾದ ಮೇಲೆ ನನಗೆ ಸ್ಟಾರ್ ಡಮ್ ಸಿಕ್ಕಿತು. ಆದರೆ ಹೆಚ್ಚು ಮಂದಿ ಬಾಲ್ಯದಲ್ಲಿ ಫೇಮಸ್ ಆದವರು ವಯಸ್ಕರಾದ ನಂತರ ಫೇಮಸ್ ಆಗುವುದಿಲ್ಲʼʼ ಎಂದು ಬರೆದುಕೊಂಡಿದ್ದಾರೆ.
ತಾತ್ಕಾಲಿಕ ವೈಭವ
ʻಆಮಿಷಕ್ಕೆ ಒಳಗಾಗದೆ ಇರುವುದು ಕಷ್ಟ. ಅದರೆ ಅಸಾಧ್ಯವಲ್ಲ. ಇಂದು ಟಿವಿಯಲ್ಲಿನ ರಿಯಾಲಿಟಿ ಶೋಗಳು ಮಕ್ಕಳಿಗೆ ಆಮಿಷವನ್ನು ಒಡ್ಡುತ್ತಿವೆ. ಪರದೆಯ ಮೇಲೆ ಇರಲು ನಾವು ಇದ್ದಂತೆ ಅಥವಾ ಇರಬೇಕಾದಂತೆ ನೀವು ಫೋಟೊಜೆನಿಕ್ ಅಥವಾ ಭಾವನಾತ್ಮಕವಾಗಿರಬೇಕಾಗಿಲ್ಲ. ಸಂಗೀತ, ನೃತ್ಯ, ನಟನೆ ಇದು ನಿಮಗೆ ಅಲ್ಪಾವಧಿಯ ಖ್ಯಾತಿಯನ್ನು ತರಬಲ್ಲದು! ಹಣ ಮತ್ತು ಜನಪ್ರಿಯತೆಯ ಮುಂದೆ ಬುದ್ಧಿವಂತಿಕೆಯು ಮೌನವಾಗಿದೆಯೇ ಅಥವಾ ಇದು ಕೇವಲ ಕರ್ಮವೇ?!
ನಾನು ಒಬ್ಬ ನಟಿನಾಗಿ, ಬಾಲ ಕಲಾವಿದೆಯಾಗಿ ಕಂಡಾಗ, ಯಾವುದೋ ಟೆಂಪರರಿ ವೈಭವಕ್ಕಾಗಿ ಹೆತ್ತವರು ಮುಗ್ಧತೆಯನ್ನು ತುಳಿದ ಹಾಗೆ ಆ ಮಗುವನ್ನು ನೋಡಿದಾಗ ನನಗೆ ದುಃಖವಾಗುತ್ತದೆ! ಎಂದು ಮಾಳವಿಕಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Nisha narasapa: ಬಗೆದಷ್ಟು ಬೆಳಕಿಗೆ ಬರ್ತಿದೆ ನಿಶಾ ನರಸಪ್ಪ ಮಾಡಿರುವ ಮಹಾ ಮೋಸ!
ಮಾಳವಿಕಾ ಪೋಸ್ಟ್
ಇದಕ್ಕೆ ಪೂರಕವಾಗಿ, ಸಾಮಾಜಿಕ ಜಾಲತಾಣದಲ್ಲೂ ವಂಶಿಕಾ ಪೋಷಕರಿಗೆ ಕಿವಿಮಾತು ಹೇಳಿದ್ದಾರೆ ನೆಟ್ಟಿಗರು. ʻʻನಿಶಾ ನರಸಪ್ಪ ವಂಚನೆಗೆ ಇನ್ನಷ್ಟು ಮಕ್ಕಳು ಒಳಗಾಗಬಾರದು. ರೀಲ್ಸ್ ಮಾಡಿಸಿ ವಂಶಿಕಾ ಮಗುವನ್ನ ನೀವೇ ಹಾಳು ಮಾಡಿದ್ದು. ರಿಯಾಲಿಟಿ ಶೋಗಳಿಗಿಂತ ಮಕ್ಕಳಿಗೆ ಓದು ಮುಖ್ಯ. ಈ ಘಟನೆಯಿಂದ ಎಲ್ಲಾ ಪೋಷಕರು ಎಚ್ಚೆತ್ತುಕೊಳ್ಳಬೇಕು. ಈ ರೀತಿಯ ಪ್ರಕರಣ ಮತ್ತೆ ಮರುಕಳಿಸಬಾರದುʼʼ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.