ನವ ದೆಹಲಿ: ಕೇಂದ್ರ ಪ್ರಭಾವಿ ಸಚಿವರಲ್ಲಿ ನಿತಿನ್ ಗಡ್ಕರಿ (Nitin Gadkari) ಕೂಡ ಒಬ್ಬರು. ಪ್ರಸ್ತುತ ಮೋದಿ ಸರ್ಕಾರದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ (Minister for Road Transport & Highways) ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ರಸ್ತೆ ಸಾರಿಗೆಗೆ ಗಣನೀಯ ಪ್ರಮಾಣದ ಕೊಡುಗೆ ನೀಡಿದ್ದಾರೆ. ಇದೀಗ ಅವರ ಜೀವನ ತೆರೆ ಮೇಲೆ ಬರಲು ಸಜ್ಜಾಗಿದೆ. ಹೈವೇ ಮ್ಯಾನ್ ಆಫ್ ಇಂಡಿಯಾ (‘Highway Man of India’) ಎನ್ನುವ ಹೆಸರಿನ ಸಿನಿಮಾ ಗಡ್ಕರಿ ಜೀವನದ ಜತೆಗೆ ಅವರ ಸಾಧನೆಗಳನ್ನು ತೆರೆ ಮೇಲೆ ತರಲಿದೆ.
ಸದ್ಯ ಭಾರತೀಯ ಚಲನಚಿತ್ರಗಳಲ್ಲಿ ಹೊಸದೊಂದು ಅಲೆ ಆರಂಭವಾಗಿದೆ. ಅದುವೇ ಬಯೋಪಿಕ್ ಚಿತ್ರಗಳ ಟ್ರೆಂಡ್. ರಾಜಕಾರಣಿ, ಕ್ರೀಡಾ ತಾರೆ, ಹಿರಿಯ ಕಲಾವಿದರು, ರೌಡಿಗಳು ಹೀಗೆ ಬೇರೆ ಬೇರೆ ರಂಗಗಳ ಪ್ರಸಿದ್ಧ ವ್ಯಕ್ತಿಗಳ ಜೀವನವನ್ನು ತೆರೆ ಮೇಲೆ ತರಲಾಗುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ರಾಜಕಾರಣಿ ನಿತಿನ್ ಗಡ್ಕರಿ ಜೀವನ ಚರಿತ್ರೆ.
ಅಕ್ಷಯ್ ದೇಶ್‌ಮುಖ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ‘ಹೈವೇ ಮ್ಯಾನ್ ಆಫ್ ಇಂಡಿಯಾ’ ಗಡ್ಕರಿ ಅವರ ಜೀವನ ಪಯಣದ ಪರಿಚಯ ಮಾಡಿ ಕೊಡಲಿದೆ. ಯಾರಿಗೂ ಗೊತ್ತಿರದ ಸಚಿವರ ವಿವರಗಳು ತೆರೆಮೇಲೆ ಬರಲಿದೆ. ಸಿನಿಮಾದ ಬರಹಗಾರ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅನುರಾಗ್ ರಾಜನ್ ಭೂಸಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಹೆಚ್ಚಿನ ವಿವರಗಳನ್ನು ನೀಡಲು ಭೂಸಾರಿ ನಿರಾಕರಿಸಿದ್ದಾರೆ. ಸಚಿವರಾಗಿ ಗಡ್ಕರಿ ಎಲ್ಲರಿಗೂ ಪರಿಚಿತ. ಆದರೆ ಯಾರಿಗೂ ಗೊತ್ತಿರದ ಅವರ ವೈಯಕ್ತಿಕ ಜೀವನ, ರಾಜಕೀಯ ಆರಂಭಿಕ ದಿನಗಳ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ ಎಂದು ಅವರು ತಿಳಿಸಿದ್ದಾರೆ. ಅಭಿಜಿತ್ ಮಜಿಂದಾರ್ ಪ್ರಸ್ತುತಪಡಿಸಲಿದ್ದು, ಅಕ್ಷಯ್ ಅನಂತ್ ದೇಶ್‌ಮುಖ್ ಚಿತ್ರವನ್ನು ನಿರ್ಮಿಸಲಿದ್ದಾರೆ.
ಭೂಸಾರಿ ಪ್ರಕಾರ ಗಡ್ಕರಿ ಅವರ ಸಾರ್ವಜನಿಕ ಚಿತ್ರಣವನ್ನು ಅವರ ವೈಯಕ್ತಿಕ ಕಥೆಗಳೊಂದಿಗೆ ಸಂಯೋಜಿಸಲು ಈ ಜೀವನ ಚರಿತ್ರೆ ಪ್ರಯತ್ನಿಸಲಿದೆ. ಗಡ್ಕರಿ ಅವರ ರಾಜಕೀಯ ಜೀವನ ಗಮನಾರ್ಹವಾಗಿದ್ದು, ಅವರ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಪ್ರದರ್ಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಾಯಕ ಯಾರು?
ಇಷ್ಟೆಲ್ಲ ತಿಳಿದ ಮೇಲೆ ಗಡ್ಕರಿ ಪಾತ್ರದಲ್ಲಿ ಯಾರು ಅಭಿನಯಿಸುತ್ತಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಇದನ್ನು ತಿಳಿದುಕೊಳ್ಳಲು ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಲೇಬೇಕು. ಇತ್ತೀಚೆಗೆ ಸಿನಿಮಾದ ಟೀಸರ್ ಪೋಸ್ಟರ್ ಅನಾವರಣಗೊಳಿಸಲಾಗಿದೆ. ಆದರೆ ಅದರಲ್ಲಿ ನಾಯಕನ ಪರಿಚಯ ಮಾಡಿಕೊಟ್ಟಿಲ್ಲ. ನಿತಿನ್ ಗಡ್ಕರಿ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎನ್ನುವ ಪ್ರೇಕ್ಷಕರ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪೋಸ್ಟರ್‌ನಲ್ಲಿ ನಾಯಕನ ಮುಖ ತೋರಿಸದೆ ನಿರ್ಮಾಪಕರು ಕುತೂಹಲ ತಣಿಸದೆ ಇನ್ನೂ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Gurmeet Choudhary: ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಗೆ ಸಿಪಿಆರ್ ನೀಡಿ ಬದುಕಿಸಿದ ನಟ ಗುರ್ಮೀತ್ ಚೌಧರಿ!
ನೆಟ್ಟಿಗರು ಏನಂದ್ರು?
ʼʼವಿರೋಧ ಪಕ್ಷದವರೂ ಪ್ರೀತಿಸುವ, ಗೌರವಿಸುವ ಸದ್ಯದ ಏಕೈಕ ರಾಜಕಾರಣಿ ಎಂದರೆ ಅದು ನಿತಿನ್ ಗಡ್ಕರಿʼʼ ಎಂದು ಒಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼಮೊದಲು ಈ ಪಾತ್ರಕ್ಕಾಗಿ ಅಕ್ಷಯ್ ಕುಮಾರ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ ನೀಡಿದ್ದರಿಂದ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.