Site icon Vistara News

Niveditha Shivarajkumar: ನಿವೇದಿತಾ ಶಿವರಾಜ್‌ ಕುಮಾರ್ ನಿರ್ಮಾಣದ ‘ಫೈರ್ ಫ್ಲೈʼ ಮೊದಲ‌ ಹಂತದ ಚಿತ್ರೀಕರಣ ಮುಕ್ತಾಯ

Niveditha Shivarajkumar Fire fly The Movie Shooting

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ (Niveditha Shivarajkumar) ನಿರ್ಮಾಣದ ಫೈರ್ ಫ್ಲೈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಶ್ರೀ ಮುತ್ತು ಸಿನಿ ಸರ್ವೀಸ್‌ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆ ಫೈರ್ ಫ್ಲೈ ಸಿನಿಮಾ. ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅಕ್ಟೋಬರ್ ತಿಂಗಳ ಮೂರನೇ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ʻಫೈರ್ ಫ್ಲೈʼ ಸಿನಿಮಾ ಜೂನ್‌ 15ರಂದು ಸೆಟ್ಟೇರಿತ್ತು. ಬೆಂಗಳೂರಿನ ಕಾಡು ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿತ್ತು. ಶಿವರಾಜ್ ಕುಮಾರ್ ದಂಪತಿಯು ಮಗಳ ಚೊಚ್ಚಲ ನಿರ್ಮಾಣ ಸಿನಿಮಾಗೆ ಶುಭ ಹಾರೈಸಿದ್ದರು. ಫೈರ್ ಫ್ಲೈ ಸಿನಿಮಾವನ್ನು ಯುವ ನಟ ವಂಶಿ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಶ್‌ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಡ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾ ಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅವರು, ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈಗ ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೊ ಆಗಿ ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Niveditha Shivarajkumar: ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಮಗಳ ಚಿತ್ರಕ್ಕೆ ಶಿವಣ್ಣ ದಂಪತಿ ಹಾರೈಕೆ!

ಶಿವಣ್ಣ ಯಾವಾಗಲೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಅದೇ ರೀತಿ ನಿವೇದಿತಾ ಶಿವರಾಜ್‌ಕುಮಾರ್‌ ಕೂಡ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಲು ಈ ಸಂಸ್ಥೆ ಮುಡಿಪಾಗಿದೆ.

Exit mobile version