ವಾಷಿಂಗ್ಟನ್: ಇದೇ ತಿಂಗಳ 13ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆದಿವೆ. ಈ ಬಾರಿ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಕೂಡ ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿರುವುದು ಭಾರತೀಯರ ಕುತೂಹಲಕ್ಕೆ ಕಾರಣವಾಗಿದೆ. ಹೀಗಿರುವಾಗ ಭಾರತೀಯರಿಗೆ ಖುಷಿ ತರುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿಗೆ ಹಾಲಿವುಟ್ ನಟಿ ಒಬ್ಬರು ಹೆಜ್ಜೆ ಹಾಕಲಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.
ಇದನ್ನೂ ಓದಿ: Oscar 2023 : ಬಹುನಿರೀಕ್ಷಿತ ಆಸ್ಕರ್ ಪ್ರಶಸ್ತಿ ಘೋಷಣೆ ಯಾವಾಗ? ನೋಡುವುದು ಹೇಗೆ?
ಅಮೆರಿಕದ ನಟಿ ಮತ್ತು ಖ್ಯಾತ ನೃತ್ಯಗಾರ್ತಿ ಲಾರೆನ್ ಗಾಟ್ಲೀಬ್ ಅವರು ಆಸ್ಕರ್ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಭಾರತದ ಮೇಲೆ ಅಪಾರ ಪ್ರೀತಿ ಹೊಂದಿರುವ ಈ ನಟಿ ಈ ಹಿಂದೆ ʼಜಲ್ ದಿಖ್ಲಾ ಜಾʼ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.
ಈ ವಿಚಾರವಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಲಾರೆನ್, “ವಿಶೇಷ ಸುದ್ದಿ. ನಾನು ಆಸ್ಕರ್‌ನಲ್ಲಿ ನಾಟು ನಾಟು ಹಾಡಿಗೆ ಪ್ರದರ್ಶನ ನೀಡುತ್ತಿದ್ದೇನೆ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಉತ್ಸುಕುಳಾಗಿದ್ದೇನೆ. ನನಗೆ ಶುಭ ಹಾರೈಸಿ” ಎಂದು ಬರೆದುಕೊಂಡಿದ್ದಾರೆ. ಅಂದ ಹಾಗೆ ವೇದಿಕೆ ಮೇಲೆ ಈ ಹಾಡನ್ನು ಹಾಡಿನ ಮೂಲ ಗಾಯಕರೇ ಹಾಡಲಿದ್ದಾರೆ. ಹಾಗೆಯೇ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನೃತ್ಯ ಮಾಡಲಿದ್ದಾರೆ ಎಂದು ಈ ಹಿಂದೆ ವದಂತಿಗಳಾಗಿದ್ದವು.
ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಜತೆಯಲ್ಲಿ ಅಪ್ಲಾಸ್ (ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್ ಮೇವರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪಥರ್ ವಕಾಂಡಾ ಫಾರೆವರ್). ಮತ್ತು ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒನ್ಸ್) ಹಾಡುಗಳು ಆಸ್ಕರ್ ಸ್ಪರ್ಧೆಯಲ್ಲಿವೆ.