ಬೆಂಗಳೂರು: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ (Oscars 2023) ಪ್ರದಾನ ಕಾರ್ಯಕ್ರಮ ಲಾಸ್ ಏಂಜಲೀಸ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ನಮ್ಮ ದೇಶದ ಹೆಮ್ಮೆಗಳಾದ ಆರ್‌ಆರ್‌ಆರ್ ಸಿನಿಮಾ ಹಾಗೂ ʼದಿ ಎಲಿಫ್ಯಾಂಟ್ ವಿಸ್ಪರ್ಸ್ʼ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಇದಷ್ಟೇ ಅಲ್ಲದೆ ಹಲವಾರು ಸಿನಿಮಾಗಳು ಪ್ರಶಸ್ತಿ ಪಡೆದಿರುವ ಸಂಭ್ರಮದಲ್ಲಿವೆ.
ಇದನ್ನೂ ಓದಿ: Oscars 2023: ಆಸ್ಕರ್ ಪಾರ್ಟಿಯ ಬಳಿಕ ಶಾರ್ಟ್ ಪಿಂಕ್ ಡ್ರೆಸ್‌ನಲ್ಲಿ ಮಿಂಚಿದ ದೀಪಿಕಾ ಪಡುಕೋಣೆ
ಎಲ್ಲಕ್ಕಿಂತ ಹೆಚ್ಚು ಪ್ರಶಸ್ತಿ ಪಡೆದಿರುವುದು ʼಎವರಿಥಿಂಗ್ ಎವರಿಒನ್ ಆಲ್ ಅಟ್ ಒನ್ಸ್ʼ ಸಿನಿಮಾ. ಈ ಸಿನಿಮಾಕ್ಕೆ ಒಟ್ಟು ಏಳು ಆಸ್ಕರ್ ಪ್ರಶಸ್ತಿಗಳು ಬಂದಿವೆ. ಹಾಗೆಯೇ ʼಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ʼ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಮತ್ತು ʼದಿ ವೇಲ್ʼ ಸಿನಿಮಾ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ಪ್ರಶಸ್ತಿಗಳನ್ನು ಗೆದ್ದ ಸಿನಿಮಾಗಳನ್ನು ವೀಕ್ಷಿಸುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಎವರಿಥಿಂಗ್ ಎವರಿಒನ್ ಆಲ್ ಅಟ್ ಒನ್ಸ್ – ಸೋನಿ ಲೈವ್
ಈ ಸಿನಿಮಾವನ್ನು ಡೇನಿಯಲ್ ಅವರು ನಿರ್ದೇಶಿಸಿದ್ದಾರೆ. ಮಿಚೆಲ್ ತೆಹ್, ಕೆ ಹುಯ್ ಕ್ವಾನ್, ಸ್ಟೆಫನಿ ಹ್ಸು ಮತ್ತು ಜೇಮೀ ಲೀ ಕರ್ಟಿಸ್ ಅವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಒಟ್ಟು ಏಳು ಆಸ್ಕರ್‌ಗಳನ್ನು ಗೆದ್ದುಕೊಂಡಿದೆ. ಹಾಗೆಯೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಮಾಡಿಕೊಂಡಿದೆ. 100 ಮಿಲಿಯನ್ ಡಾಲರ್‌ಗೂ ಅಧಿಕ ಹಣ ಗಳಿಸಿದೆ. ಈ ಸಿನಿಮಾ ಸೋನಿಲಿವ್‌ನಲ್ಲಿ ಲಭ್ಯವಿದೆ.
ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ – ನೆಟ್‌ಫ್ಲಿಕ್ಸ್
ಇದು ನೆಟ್‌ಫ್ಲಿಕ್ಸ್‌ನಲ್ಲೇ ಬಿಡುಗಡೆಯಾದ ಸಿನಿಮಾವಾಗಿದೆ. ಎಡ್ವರ್ಡ್ ಬರ್ಗರ್ ಅವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಅತ್ಯುತ್ತಮ ಛಾಯಾಗ್ರಹಣ, ಸ್ಕೋರ್, ನಿರ್ಮಾಣ ವಿನ್ಯಾಸ ಮತ್ತು ಅತ್ಯುತ್ತಮ ಇಂಟರ್‌ನ್ಯಾಷನಲ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ದಿ ಎಲೆಫೆಂಟ್ ವಿಸ್ಪರ್ಸ್- ನೆಟ್‌ಫ್ಲಿಕ್ಸ್
ಈ ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೋನ್ಸಾಲ್ವಿಸ್ ಅವರು ನಿರ್ದೇಶಿಸಿದ್ದರೆ, ಗುನೀತ್ ಮೊಂಗಾ ಅವರು ನಿರ್ಮಾಣ ಮಾಡಿದ್ದಾರೆ. ದಂಪತಿಯು ಆನೆಯೊಂದನ್ನು ನೋಡಿಕೊಳ್ಳುವ ಕಥೆ ಇದರಲ್ಲಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಬಾಂಧವ್ಯವನ್ನು ಇದರಲ್ಲಿ ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
ಆರ್‌ಆರ್‌ಆರ್ – ನೆಟ್‌ಫ್ಲಿಕ್ಸ್, ಡಿಸ್ನೀ ಹಾಟ್‌ಸ್ಟಾರ್ ಮತ್ತು ಜೀ 5
ಆರ್‌ಆರ್‌ಆರ್ ಸಿನಿಮಾ ದಕ್ಷಿಣ ಭಾರತದ ಸಿನಿಮಾಗಳ ದಿಕ್ಕನ್ನೇ ಬದಲಿಸಿದ ಸಿನಿಮಾ. ಈ ಸಿನಿಮಾ ಭಾರತದಲ್ಲಿಯೇ ಅತ್ಯಂತ ಹೆಚ್ಚು ಗಳಿಕೆ ಮಾಡಿಕೊಂಡ ಸಿನಿಮಾ ಎಂದೂ ದಾಖಲೆ ಬರೆದಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ನೆಟ್‌ಫ್ಲಿಕ್ಸ್, ಡಿಸ್ನೀ-ಹಾಟ್‌ಸ್ಟಾರ್ ಮತ್ತು ಜೀ5ನಲ್ಲಿ ನೋಡಲು ಸಿಗುತ್ತದೆ.
ದಿ ಬನ್ಶೀಸ್ ಆಫ್ ಇನಿಶೆರಿನ್ – ಡಿಸ್ನೀ ಹಾಟ್‌ಸ್ಟಾರ್
ಈ ಸಿನಿಮಾ ಹಾಸ್ಯಮಯ ಸಿನಿಮಾವಾಗಿದೆ. ಕಾಲಿನ್ ಫಾರೆಲ್, ಕೆರ್ರಿ ಕಾಂಡನ್, ಬ್ಯಾರಿ ಕಿಯೋಘನ್ ಮತ್ತು ಬ್ರೆಂಡನ್ ಗ್ಲೀಸನ್ ನಟಿಸಿರುವ ಈ ಸಿನಿಮಾ ಡಿಸ್ನೀ ಹಾಟ್‌ಸ್ಟಾರ್‌ನಲ್ಲಿದೆ. ಈ ಸಿನಿಮಾದ ಆಸ್ಕರ್‌ನ 9 ವಿಭಾಗಗಳಲ್ಲಿ ನಾಮ ನಿರ್ದೇಶನವಾಗಿತ್ತಾದರೂ ಒಂದೂ ಪ್ರಶಸ್ತಿ ಪಡೆಯುವಲ್ಲಿ ಸಫಲವಾಗಿಲ್ಲ.