ಬೆಂಗಳೂರು: ಆಸ್ಕರ್ ಪ್ರಶಸ್ತಿ (Oscar 2023) ಸಿನಿಮಾ ರಂಗದವರಿಗೆ ಅತಿ ದೊಡ್ಡ ಗೌರವ. ಆ ಪ್ರಶಸ್ತಿ ಪಡೆಯಬೇಕೆನ್ನುವುದು ಸಿನಿಮಾ ಕ್ಷೇತ್ರದ ಎಲ್ಲರ ಕನಸಾಗಿರುತ್ತದೆ. ಅದರಲ್ಲೂ ಈ ಬಾರಿಯ ಆಸ್ಕರ್ ಪ್ರಶಸ್ತಿಯಂತೂ ಇನ್ನೂ ವಿಶೇಷ. ಭಾರತ ಕೂಡ ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ನಮ್ಮ ಮುಡಿಗೆ ಪ್ರಶಸ್ತಿಯ ಗರಿ ಸಿಗುತ್ತದೆಯೇ ಎಂದು ನೋಡಲು ಭಾರತೀಯರು ಕಾದು ಕುಳಿತಿದ್ದಾರೆ. ಹಾಗಿದ್ದರೆ ಈ ಪ್ರಶಸ್ತಿ ಕಾರ್ಯಕ್ರಮ ಯಾವಾಗ ನಡೆಯಲಿದೆ? ಅದನ್ನು ನೋಡುವುದು ಹೇಗೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ : Priyanka Chopra: ಪ್ರಿ-ಆಸ್ಕರ್ ಇವೆಂಟ್‌ನಲ್ಲಿ ಕಂಗೊಳಿಸಿದ ಪ್ರಿಯಾಂಕ ಚೋಪ್ರಾ
ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ ಭಾನುವಾರ ಅಂದರೆ ಮಾರ್ಚ್ 12ರಂದು ನಡೆಯಲಿದೆ. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಭಾರತದ ಸಮಯದ ಪ್ರಕಾರ 13ನೇ ತಾರೀಕಿನಂದು ಬೆಳಗ್ಗೆ 5.30ರಿಂದ ಕಾರ್ಯಕ್ರಮ ನಡೆಯಲಿದ್ದು, ಅದು ಡಿಸ್ನೇ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.
ಈ ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲ್ ಅವರು ನಡೆಸಿಕೊಡಲಿದ್ದಾರೆ. ಅವರು ಈ ಹಿಂದೆ 2017 ಮತ್ತು 2019ರಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇನ್ನು ಪ್ರಶಸ್ತಿ ಪ್ರೆಸೆಂಟರ್ ಪಟ್ಟಿಯಲ್ಲಿ ಭಾರತದ ದೀಪಿಕಾ ಪಡುಕೋಣೆ ಹಾಗೂ, ನಟ-ನಟಿಯರಾದ ಎಮಿಲಿ ಬ್ಲಂಟ್, ರಿಜ್ ಅಹ್ಮದ್, ಡ್ವೇನ್ ಜಾನ್ಸನ್, ಗ್ಲೆನ್ ಕ್ಲೋಸ್, ಅರಿಯಾನಾ ಡಿಬೋಸ್, ಸ್ಯಾಮ್ಯುಯೆಲ್ ಎಲ್.ಜಾಕ್ಸನ್, ಜೆನ್ನಿಫರ್ ಕೊನ್ನೆಲ್ಲಿ, ಮೈಕೆಲ್ ಜೋನಾಥನ್, ಮೈಕೆಲ್ ಬಿ.ಮೇಜರ್ಸ್, ಟ್ರಾಯ್ ಕೋಟ್ಸುರ್, ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೊನೆ, ಕ್ವೆಸ್ಟ್ಲೋವ್, ಜೊಯ್ ಸಾಲ್ಡಾ ಮತ್ತು ಡೊನ್ನಿ ಯೆನ್ ಇದ್ದಾರೆ. ಹಾಗೆಯೇ ದನೈ ಗುರಿರಾ, ಜೆಸ್ಸಿಕಾ ಚಸ್ಟೈನ್, ಸಲ್ಮಾ ಹಯೆಕ್ ಪಿನಾಲ್ಟ್, ಎಲಿಜಬೆತ್ ಬ್ಯಾಂಕ್ಸ್, ಆಂಟೋನಿಯೊ ಬಾಂಡೆರಾಸ್, ಜಾನ್ ಚೋ, ನಿಕೋಲ್ ಕಿಡ್‌ಮನ್, ಆಂಡ್ರ್ಯೂ ಗಾರ್ಫೀಲ್ಡ್, ಹಗ್ ಗ್ರಾಂಟ್, ಫ್ಲಾರೆನ್ಸ್ ಪಗ್ ಮತ್ತು ಸಿಗೌರ್ನಿ ವೀವರ್ ಕೂಡ ಪ್ರೆಸೆಂಟರ್ಸ್ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: Priyanka Chopra: ಪ್ರಿ- ಆಸ್ಕರ್ ಇವೆಂಟ್‌ನಲ್ಲಿ ಭಾಗಿಯಾದ ಪ್ರಿಯಾಂಕಾ-ನಿಕ್ ಜೋಡಿ
ನಾಟು ನಾಟು ಪ್ರದರ್ಶನ
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ವೇದಿಕೆ ಕಾರ್ಯಕ್ರಮ ನೀಡಲಿದ್ದಾರೆ. ರಿಹಾನ್ನಾ ಅವರು ʼಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್ʼನ ʼಲಿಫ್ಟ್ ಮಿ ಅಪ್ʼ ಹಾಡಿಗೆ ಪ್ರದರ್ಶನ ನೀಡಲಿದ್ದಾರೆ. ಲೇಡಿ ಗಾಗಾ ಅವರು ʼಟಾಪ್ ಗನ್: ಮೇವರಿಕ್ʼನ ʼಹೋಲ್ಡ್ ಮೈ ಹ್ಯಾಂಡ್ʼ ಹಾಡಿಗೆ ಪ್ರದರ್ಶನ ನೀಡಲಿದ್ದಾರೆ. ಭಾರತದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಭೈರವ ಅವರು ಆರ್‌ಆರ್‌ಆರ್ ಸಿನಿಮಾದ ʼನಾಟು ನಾಟುʼ ಹಾಡನ್ನು ಹಾಡಿ ಮನೋರಂಜಿಸಲಿದ್ದಾರೆ. ಹಾಗೆಯೇ ಲೆನ್ನಿ ಕ್ರಾವಿಟ್ಜ್ ಕೂಡ ಪ್ರದರ್ಶನ ನೀಡಲಿದ್ದಾರೆ.
ಎಷ್ಟು ಪ್ರಶಸ್ತಿ?
ಆಸ್ಕರ್‌ನಲ್ಲಿ ಸಿನಿಮಾ ರಂಗದ ಹಲವಾರು ಸಿಬ್ಬಂದಿಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ನಿರ್ದೇಶನ, ನಾಯಕ ನಟ, ನಾಯಕ ನಟಿ, ಸಂಕಲನ ಸೇರಿದಂತೆ ಒಟ್ಟು 23 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.