ಬೆಂಗಳೂರು: 95ನೇ ಆಸ್ಕರ್ (Oscars 2023) ಪ್ರಶಸ್ತಿ ಪ್ರಧಾನವು ಮಾರ್ಚ್ 12, ಭಾನುವಾರ ಎಬಿಸಿಯಲ್ಲಿ ನೇರ ಪ್ರಸಾರವಾಗಲಿದೆ. ಈಗಾಗಲೇ ರಾಮ್ ಚರಣ್ ಅಮೆರಿಕದ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ನಾಮನಿರ್ದೇಶನಗೊಂಡಿದೆ. ರಾಮ್ ಚರಣ್ ಲಾಸ್ ಏಂಜಲೀಸ್‌ನಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ, ಸಹ-ನಟ ಜೂನಿಯರ್ ಎನ್‌ಟಿಆರ್ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರೊಂದಿಗೆ ಇದ್ದಾರೆ. ಸಂದರ್ಶನವೊಂದರಲ್ಲಿ ಚಿತ್ರದ ನಾಟು ನಾಟು ಹಾಡು ಆಸ್ಕರ್‌ನಲ್ಲಿ ನಾಮನಿರ್ದೇಶನಗೊಂಡಿದ್ದು, ಒಲಿಂಪಿಕ್ ಚಿನ್ನ ಗೆದ್ದಂತೆ ಭಾಸವಾಗಿದೆ ಎಂದು ಹೇಳಿಕೊಂಡಿದ್ದಾರೆ.
RRR ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ನಾಮನಿರ್ದೇಶನಗೊಂಡಿದೆ. ಇದರ ಜತೆ ಇತರೆ ಹಾಡುಗಳಾದ, ಅಫ್ಲೋಸ್(ಟೆಲ್ ಇಟ್ ಲೈಕ್ ಎ ವುಮನ್) (Applause (Tell It Like a Woman), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್ ಮೇವರಿಕ್) (Hold My Hand (Top Gun Maverick), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪಥರ್ ವಕಾಂಡಾ ಫಾರೆವರ್) (Lift Me Up (Black Pather Wakanda Forever), ಮತ್ತು ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒನ್ಸ್) (This is a Life (Everything Everywhere All at Once) ನಾಮರ್ದೇಶನಗೊಂಡಿದೆ. ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಆಸ್ಕರ್ ವೇದಿಕೆಯಲ್ಲಿ ತೆಲುಗು ಹಾಡನ್ನು ಪ್ರದರ್ಶಿಸಲಿದ್ದಾರೆ.
ಟಾಕ್ ಈಸಿ ಪಾಡ್‌ಕಾಸ್ಟ್‌ನಲ್ಲಿ ರಾಮ್‌ಚರಣ್
ಟಾಕ್ ಈಸಿ ಪಾಡ್‌ಕಾಸ್ಟ್ (Talk Easy podcast) ಸಂದರ್ಶನವೊಂದರಲ್ಲಿ, ರಾಮ್ ಚರಣ್ ಮಾತನಾಡಿ ʻʻನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವುದು ನಮಗೆಲ್ಲರಿಗೂ ಭಾವನಾತ್ಮಕವಾಗಿದೆ. ಇಲ್ಲಿಗೆ ಬರುವ ಮುಂಚೆ ನನ್ನ ತಂದೆ ತುಂಬ ಭಾವುಕರಾಗಿದ್ದರು. ನನ್ನ ತಂದೆ 154 ಸಿನಿಮಾಗಳಲ್ಲಿ ನಟಿಸಿ 42 ವರ್ಷಗಳಿಂದ ಸಿನಿರಂಗದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಇದೀಗ ಆಸ್ಕರ್ ಪ್ರಶಸ್ತಿಗೆ ಬಂದಿದ್ದಾರೆ. ಅದು ಕೂಡ ಒಂದು ದೊಡ್ಡ ಸಾಧನೆ ಎಂದು ಅವರು ಭಾವಿಸಿದ್ದಾರೆ. ಪ್ರಶಸ್ತಿಗಾಗಿ ನಾವು ಕಾಯುತ್ತಿದ್ದೇವೆ. ನಮ್ಮ ವೃತ್ತಿಜೀವನದ ಆರಂಭದಲ್ಲಿ ಇದರ ಮೌಲ್ಯ ನಮಗೆ ತಿಳಿದಿರಲಿಲ್ಲ. ಈ ಪ್ರಶಸ್ತಿ ಪ್ರಿತಿಯೊಬ್ಬ ಭಾರತೀಯರ ಪ್ರಾರ್ಥನೆಯಾಗಿದೆ. ಈ ಪ್ರಶಸ್ತಿ ಕೇವಲ ನಟರಿಗೆ ಮಾತ್ರವಲ್ಲ. ಭಾರತಕ್ಕೆ ಸಂದುವಂತದ್ದು, ಗೆದ್ದರೆ ಭಾರತವು ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದಂತೆ. ಆಸ್ಕರ್ ಒಲಿಂಪಿಕ್ ಚಿನ್ನದ ಪದಕಕ್ಕೆ ಸಮಾನವಾಗಿದೆʼʼಎಂದು ಹೇಳಿದ್ದಾರೆ.
ರಾಮ್ ಚರಣ್ ಲುಗು ಚಿತ್ರ RC15 ನಲ್ಲಿ ಕಿಯಾರಾ ಆಡ್ವಾಣಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಮಾರ್ಚ್ 27 ರಂದು ರಾಮ್ ಚರಣ್ ಅವರ ಜನ್ಮದಿನದಂದು ಬಿಡುಗಡೆಯಾಗಲಿದೆ.