Site icon Vistara News

Oscars 2024: ಪ್ರಿಯಾಂಕಾ ಚೋಪ್ರಾ ಸಾಥ್‌ ಕೊಟ್ಟ ಭಾರತೀಯ ಡಾಕ್ಯುಮೆಂಟರಿಗೆ ನಿರಾಸೆ

Oscars 2024 To Kill a Tiger loses best documentary feature

ಬೆಂಗಳೂರು: ಭಾರತ ಮೂಲದ ಕೆನಡಾದಲ್ಲಿ ನೆಲೆಸಿರುವ ನಿಶಾ ಪಹುಜಾ (Nisha Pahuja) ಅವರ ‘ಟು ಕಿಲ್ ಎ ಟೈಗರ್’ (To Kill A Tiger) ಸಾಕ್ಷ್ಯಚಿತ್ರವು ಈ ಬಾರಿಯ ಆಸ್ಕರ್‌ನಲ್ಲಿ ಸ್ಪರ್ಧಿಸಿತ್ತು. ಆದರೆ, ಈ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ ದೊರೆತಿಲ್ಲ. ಈ ಪ್ರಶಸ್ತಿಯು ʻ20 ಡೇಸ್ ಇನ್ ಮರಿಯುಪೋಲ್ʼ ಹೆಸರಿನ ಡಾಕ್ಯುಮೆಂಟರಿಗೆ ಸಂದಿದೆ. ಉಕ್ರೇನಿಯನ್ ಚಲನಚಿತ್ರ ನಿರ್ಮಾಪಕ ಮತ್ತು ವರದಿಗಾರ ಮಿಸ್ಟಿಸ್ಲಾವ್ ಚೆರ್ನೋವ್ ನಿರ್ದೇಶಿಸಿದ, ʻ20 ಡೇಸ್ ಇನ್ ಮಾರಿಯುಪೋಲ್ʼ(20 Days in Mariupol) ಅತ್ಯುತ್ತಮ ಸಾಕ್ಷ್ಯಚಿತ್ರ (Oscars 2024) ಫೀಚರ್ ವಿಭಾಗದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ನಿಶಾ ಪಹುಜಾ ಅವರು ಬರೆದು ನಿರ್ದೇಶಿಸಿರುವ ‘ಟು ಕಿಲ್ ಎ ಟೈಗರ್’ (To Kill A Tiger) ಭಾರತದಲ್ಲಿ ನಿರ್ಮಿಸಲಾಗಿತ್ತು. ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಗೆ ಬೆಂಬಲವಾಗಿ ನಿಂತಿದ್ದರು. ಡಾಕ್ಯುಮೆಂಟರಿ ಬಗ್ಗೆ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಿಯಾಂಕಾ, ಆಸ್ಕರ್ ನಾಮಿನೇಷನ್ ಗಳಿಸಿರುವ ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿ ತಂಡವನ್ನು ನಾನು ಸೇರಿಕೊಳ್ಳುತ್ತಿರುವುದು ಬಹಳ ಹೆಮ್ಮೆ ಎನಿಸಿದೆ ಎಂದಿದ್ದರು. ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಆಸ್ಕರ್-ನಾಮನಿರ್ದೇಶಿತ ಸಾಕ್ಷ್ಯಚಿತ್ರ ‘ಟು ಕಿಲ್ ಎ ಟೈಗರ್’ ತಂಡವನ್ನು ಸೇರಿಕೊಂಡಿದ್ದರು. ನೆಟ್​ಫ್ಲಿಕ್ಸ್​, ‘ಟು ಕಿಲ್ ಎ ಟೈಗರ್’ ಡಾಕ್ಯುಮೆಂಟರಿಯ ಸ್ಟ್ರೀಮಿಂಗ್ ಹಕ್ಕು ಖರೀದಿ ಮಾಡಿತ್ತು.

ಇದನ್ನೂ ಓದಿ: Oscars 2024: ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕನನ್ನು ಸ್ಮರಿಸಿದ ಆಸ್ಕರ್‌ ವೇದಿಕೆ

ನಿಶಾ ಪಹುಜಾ ಯಾರು?

1970ರ ದಶಕದಲ್ಲಿ ನಿಶಾ ಪಹುಜಾ ಕುಟುಂಬದೊಂದಿಗೆ ಕೆನಡಾದಲ್ಲಿ ನೆಲಿಸಿದ್ದರು. ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದರು. ಬಳಿಕ ಸಿಬಿಸಿ ಸಾಕ್ಷ್ಯಚಿತ್ರ ಸಮ್ ಕೈಂಡ್ ಆಫ್ ಅರೇಂಜ್‌ಮೆಂಟ್‌ನಲ್ಲಿ (CBC documentary Some Kind of Arrangement) ಸಂಶೋಧಕರಾಗಿ ಕೆಲಸ ಮಾಡಿದರು.

ಇದನ್ನೂ ಓದಿ: Oscars 2024: ಯಾರಿಗೆ, ಯಾವ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ? ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ!

ಏನಿದು ಟು ಕಿಲ್ ಎ ಟೈಗರ್?

ಕಾರ್ನಿಲಿಯಾ ಪ್ರಿನ್ಸಿಪ್ ಮತ್ತು ಡೇವಿಡ್ ಒಪೆನ್‌ಹೈಮ್ (Cornelia Principe and David Oppenheim) ನಿರ್ಮಿಸಿರುವ ಈ ಸಾಕ್ಷ್ಯಚಿತ್ರದಲ್ಲಿ 13 ವರ್ಷದ ಮಗಳನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ದುರುಳರ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ತಂದೆಯ ಕಥೆಯನ್ನು ಹೊಂದಿದೆ. ಈ ಸಾಕ್ಷ್ಯಚಿತ್ರವನ್ನು ಈ ಹಿಂದೆ ಟೊರೊಂಟೊ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2022ನಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲಿ ಇದು ʻಆಂಪ್ಲಿಫೈ ವಾಯ್ಸ್ ಅವಾರ್ಡ್‌ʼ (Amplify Voices Award) ಪ್ರಶಸ್ತಿಯನ್ನು ಗೆದ್ದುಕೊಂಡಿತು.

Exit mobile version