Site icon Vistara News

OTT Releases: ʼಫೈಟರ್‌ʼನಿಂದ ʼಓಪನ್‌ಹೈಮರ್‌ʼವರೆಗೆ; ಈ ವಾರ ಒಟಿಟಿಯಲ್ಲಿ ನೀವು ನೋಡಬಹುದಾದ ಚಿತ್ರಗಳ ಪಟ್ಟಿ ಇಲ್ಲಿದೆ

OTT Releases

OTT Releases

ಬೆಂಗಳೂರು: ಈಗ ಏನಿದ್ದರೂ ಒಟಿಟಿ ಜಮಾನ. ಹೀಗಾಗಿ ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ಗೆ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ವಿವಿಧ ಒಟಿಟಿ ಫ್ಲಾಟ್‌ಫಾರ್ಮ್‌ಗಳ ಪ್ರತಿ ವಾರ ಚಿತ್ರ, ವೆಬ್‌ ಸೀರಿಸ್‌ ಬಿಡುಗಡೆ ಮಾಡಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈ ವಾರವೂ ಬಹು ನಿರೀಕ್ಷಿತ ಚಿತ್ರಗಳು, ನಿಮ್ಮ ನೆಚ್ಚಿನ ಶೋಗಳು ಸ್ಟ್ರೀಮಿಂಗ್‌ ಆಗುತ್ತವೆ. ಎಲ್ಲಿ, ಯಾವಾಗ ಎನ್ನುವ ವಿವರ ಇಲ್ಲಿದೆ (OTT Releases).

ಫೈಟರ್‌ (ನೆಟ್‌ಫ್ಲಿಕ್ಸ್‌)-ಮಾರ್ಚ್‌ 21

ಈ ವರ್ಷದ ಬಾಲಿವುಡ್‌ ಮೊದಲ ಹಿಟ್‌ ಚಿತ್ರ ʼಫೈಟರ್‌ʼ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಹೃತಿಕ್‌ ರೋಷನ್‌ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಜನವರಿ 25ರಂದು ತೆರೆಕಂಡ ಈ ಬಹುಕೋಟಿ ವೆಚ್ಚದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್‌ 21ರಿಂದ ಲಭ್ಯ.

ಏ ವತನ್ ಮೇರೆ ವತನ್ (ಅಮೆಜಾನ್ ಪ್ರೈಮ್ ವಿಡಿಯೊ)-ಮಾರ್ಚ್‌ 21

ಸಾರಾ ಅಲಿ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಏ ವತನ್ ಮೇರೆ ವತನ್’ ಹಿಂದಿ ಚಿತ್ರ ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಅವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಚಿಕ್ಕ ಹುಡುಗಿಯಾಗಿದ್ದಾಗ ಮೆಹ್ತಾ 1942ರಲ್ಲಿ ಭೂಗತ ರೇಡಿಯೋ ಕೇಂದ್ರವನ್ನು ಪ್ರಾರಂಭಿಸಿದರು. ಹೀಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಕಣ್ಣನ್‌ ಅಯ್ಯರ್‌ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಮಾರ್ಚ್‌ 21ರಂದು ಇದು ಬಿಡುಗಡೆಯಾಗಿದೆ.

ಓಪನ್‌ಹೈಮರ್‌ (ಜಿಯೋ ಸಿನೆಮಾ)-ಮಾರ್ಚ್‌ 21

ಆಸ್ಕರ್‌ ಪ್ರಶಸ್ತಿ ವಿಜೇತ ಹಾಲಿವುಡ್‌ ಚಿತ್ರ ‘ಓಪನ್‌ಹೈಮರ್‌’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಮೊದಲ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್‌ಹೈಮರ್‌ ಅವರ ಜೀವನದ ಏಳು ಬೀಳನ್ನು ವಿವರಿಸುತ್ತದೆ. ಈ ಚಿತ್ರದಲ್ಲಿ ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಬರ್ಟ್ ಡೌನಿ ಜೂನಿಯರ್ ಮತ್ತು ಫ್ಲಾರೆನ್ಸ್ ಪಗ್ ನಟಿಸಿದ್ದಾರೆ. ಮಾರ್ಚ್ 21ರಿಂದ ಜಿಯೋ ಸಿನೆಮಾದಲ್ಲಿ ಪ್ರಸಾರವಾಗುತ್ತಿರುವ ಈ ಸಿನಿಮಾದ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌.

ಟಾಪ್ ಶೆಫ್ (ಜಿಯೋ ಸಿನೆಮಾ)-ಮಾರ್ಚ್‌ 21

ಜಿಯೋ ಸಿನೆಮಾದಲ್ಲಿ ಮಾರ್ಚ್ 21ರಿಂದ ಪ್ರಸಾರವಾಗುವ ಇನ್ನೊಂದು ಬಹು ನಿರೀಕ್ಷಿತ ಶೋ ಇದು. ಟಾಪ್ ಶೆಫ್ ಅಮೆರಿಕ ಜನಪ್ರಿಯ ರಿಯಾಲಿಟಿ ಶೋ ಆಗಿದ್ದು. ಇದರ 21ನೇ ಸೀಸನ್ ಸ್ಟ್ರೀಮಿಂಗ್‌ ಆಗುತ್ತಿದೆ. ಇದು ಅಡುಗೆ ಸ್ಪರ್ಧೆಯನ್ನೊಳಗೊಂಡ ರಿಯಾಲಿಟಿ ಶೋ.

ಲೂಟೆರೆ (ಡಿಸ್ನಿ+ ಹಾಟ್ ಸ್ಟಾರ್)-ಮಾರ್ಚ್‌ 22

ಹಿಂದಿಯ ಈ ವೆಬ್‌ ಸೀರಿಸ್‌ ಮಾರ್ಚ್‌ 22ರಿಂದ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯ. ಸೊಮಾಲಿಯನ್ ಸಮುದ್ರದಲ್ಲಿ ಕಡಲ್ಗಳ್ಳರು ಅಪಹರಿಸಿದ ಭಾರತೀಯ ಹಡಗಿನ ನೈಜ ಘಟನೆಯನ್ನು ಆಧರಿಸಿದ ಈ ವೆಬ್‌ ಸೀರಿಸ್‌ ಅನ್ನು ಹನ್ಸಲ್ ಮೆಹ್ತಾ ಮತ್ತು ಶೈಲೇಶ್‌ ಆರ್‌. ಸಿಂಗ್‌ ರಚಿಸಿದ್ದಾರೆ. ವಿವೇಕ್ ಗೊಂಬರ್, ದೀಪಕ್ ತಿಜೋರಿ, ರಜತ್ ಕಪೂರ್, ಚಂದನ್ ರಾಯ್ ಸನ್ಯಾಲ್ ಮತ್ತು ಅಮೃತಾ ಮತ್ತಿತರರು ನಟಿಸಿದ್ದಾರೆ.

ಅಬ್ರಹಾಂ ಓಜ್ಲರ್ (ಡಿಸ್ನಿ+ ಹಾಟ್ ಸ್ಟಾರ್)-ಮಾರ್ಚ್‌ 21

ಮಲಯಾಳಂನ ಕ್ರೈಂ ಥ್ರಿಲ್ಲರ್‌ ಚಿತ್ರ ‘ಅಬ್ರಹಾಂ ಓಜ್ಲರ್’ ಮಾರ್ಚ್‌ 21ರಿಂದ ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಈ ವರ್ಷದ ಮಲಯಾಳಂನ ಹಿಟ್‌ ಚಿತ್ರಗಳಲ್ಲಿ ಇದೂ ಒಂದು. ಜಯರಾಮ್‌, ಅನಸ್ವರಾ ರಾಜನ್‌, ಆರ್ಯಾ ಸಲೀಂ, ಸೆಂಥಿಲ್‌ ಕೃಷ್ಣ, ಸೈಜು ಕುರುಪ್‌, ಅರ್ಜುನ್‌ ಅಶೋಕನ್‌ ಮತ್ತಿತರರು ಅಭಿನಯಿಸಿರುವ ಈ ಸಿನಿಮಾದಲ್ಲಿ ಮೆಗಾ ಸ್ಟಾರ್‌ ಮಮ್ಮುಟ್ಟಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಮಿಧುನ್‌ ಮ್ಯಾನುವೆಲ್‌ ಥಾಮಸ್‌ ನಿರ್ದೇಶನದ ಈ ಚಿತ್ರ ಕನ್ನಡದಲ್ಲೂ ಲಭ್ಯ.

ಇದನ್ನೂ ಓದಿ: Amazon Prime Video: ಪ್ರೈಮ್ ವಿಡಿಯೊ ಮತ್ತೊಂದು ಸಾಹಸ; 70 ಹೊಸ ಪ್ರಾಜೆಕ್ಟ್​ಗಳ ಘೋಷಣೆ!

Exit mobile version