ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಮೈಸೂರು ದಿವಾನ ಮನೆತನದ ವಂಶಸ್ಥೆ ಶೌಖರೆ ಖಲೀಲಿ ಅಲಿಯಾಸ್ ಶೌಖರೆ ನಮಾಜಿ ಕೊಲೆಯ ಸುತ್ತ ಸುತ್ತುವ ತನಿಖಾ ಸಿರೀಸ್ ‘ಡಾನ್ಸಿಂಗ್ ಆನ್ ದಿ ಗ್ರೇವ್’ (Dancing On The Grave) ವೆಬ್ ಸಿರೀಸ್ ಏಪ್ರಿಲ್ 21ರಂದು ತೆರೆ ಕಾಣಲಿದೆ. ‘ಪ್ರೈಮ್ ವಿಡಿಯೊ’ದಲ್ಲಿ ಈ ವೆಬ್ ಸಿರೀಸ್ ಬರಲಿದೆ. ಇಂಡಿಯಾ ಟುಡೇ ಒರಿಜಿನಲ್ಸ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಪ್ಯಾಟ್ರಿಕ್ ಗ್ರಹಾಂ ಬರೆದು ನಿರ್ದೇಶಿಸಿದ್ದಾರೆ. ಏಪ್ರಿಲ್ 21ರಂದು ಭಾರತ ಸೇರಿದಂತೆ 240 ಇತರ ದೇಶಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
4 ಭಾಗಗಳಲ್ಲಿ ಇದು ಪ್ರಸಾರವಾಗಲಿದ್ದು, ಮೈಸೂರಿನ ದಿವಾನರ ಮೊಮ್ಮಗಳು ಖಲೀಲಿಯ ಕೊಲೆಯನ್ನು ವಿವಿಧ ಆಯಾಮಗಳಲ್ಲಿ ಪರಾಮರ್ಶಿಸಲಾಗಿದೆ. ಪ್ರಕರಣದ ಕುರಿತು 22,000 ಪುಟಗಳ ದಾಖಲೆಗಳನ್ನು ವಿವರವಾಗಿ ಓದಿ 57ಕ್ಕೂ ಹೆಚ್ಚು ಜನರ ಸಂದರ್ಶನಗಳನ್ನು ನಡೆಸಲಾಗಿದೆ ಹಾಗೂ ಪ್ರಕರಣದ ಬಗ್ಗೆ ಅಜ್ಞಾತ ಸತ್ಯಗಳನ್ನು ಒಟ್ಟುಗೂಡಿಸಲು ದೇಶದ ಉದ್ದಗಲಕ್ಕೂ ಪ್ರಯಾಣವನ್ನು ಕೈಗೊಳ್ಳಲಾಯಿತು ಎಂದು ಚಿತ್ರತಂಡ ಹೇಳಿದೆ.
ʻʻಕೆಲವು ಬಾರಿ ವಾಸ್ತವವು ಕಥೆಗಿಂತ ವಿಚಿತ್ರವಾಗಿರುತ್ತವೆ. ಸಾಕ್ಷ್ಯಚಿತ್ರಗಳು ಸಾಮಾಜಿಕ ವ್ಯವಸ್ಥೆ, ಸಿದ್ಧಾಂತ ಮತ್ತು ಜನರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಇವು ಅತ್ಯಂತ ಪ್ರಚೋದನಕಾರಿ ಮತ್ತು ಚಿಂತನೆಗೆ ಹಚ್ಚುವ ಅಂಶಗಳನ್ನು ಒಳಗೊಂಡಿರುತ್ತವೆ. ಪ್ರೈಮ್ ವಿಡಿಯೊದಲ್ಲಿ, ವಿಭಿನ್ನವಾದ ಮತ್ತು ಕುತೂಹಲ ಕೆರಳಿಸುವ ವಿಷಯವನ್ನು ನಾವು ಜನರಿಗೆ ಒದಗಿಸುತ್ತಿರುತ್ತೇವೆ. ಅದರಲ್ಲೂ ವಿಶೇಷವಾಗಿ ಕ್ರೈಂ ವಿಭಾಗದಲ್ಲಿ ಜನರಿಗೆ ಕುತೂಹಲ ಹೆಚ್ಚಿದೆ. ನಮ್ಮ ಮೊದಲ ಭಾರತೀಯ, ನಿಜವಾದ ಕಥೆಯನ್ನು ಒಳಗೊಂಡ ಒರಿಜಿನಲ್ ಸಿರೀಸ್ ಡ್ಯಾನ್ಸಿಂಗ್ ಆನ್ ದಿ ಗ್ರೇವ್ ಅನಾವರಣಗೊಳಿಸಲು ಉತ್ಸಾಹಿತರಾದ್ದೇವೆʼʼ ಎಂದು ಪ್ರೈಮ್ ವಿಡಿಯೊ ಇಂಡಿಯಾ ಒರಿಜಿನಲ್ಸ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದ್ದಾರೆ.
ಡ್ಯಾನ್ಸಿಂಗ್ ಆನ್ ದಿ ಗ್ರೇವ್‌ನ ಪಾತ್ರವರ್ಗದಲ್ಲಿ ಅನುಪ್ ಉಪಾಧ್ಯಾಯ, ಪತ್ರಾಲಿ ಚಟ್ಟೋಪಾಧ್ಯಾಯ, ಶಫಕ್ ನಾಜ್, ಮಧುಸೂದನ್ ನಾಯಕ್, ಭವ್ಯ ಶರ್ಮಾ ಮತ್ತು ಮೋಹಿನಿ ಕೇವಲರಮಣಿ ಇದ್ದಾರೆ.
ಇದನ್ನೂ ಓದಿ: Kannada New Movie: 50 ದಿನದ ಭಾವನಾತ್ಮಕ ಪಯಣ, ಒಟಿಟಿಯಲ್ಲಿ ‘ಹೊಂದಿಸಿ ಬರೆಯಿರಿ’ ಸಿನಿಮಾ
ಏನಿದು ಪ್ರಕರಣ?
ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಶೌಖರೆ ಖಲೀಲಿ ಅವರು 1991ರಲ್ಲಿ ನಾಪತ್ತೆಯಾಗಿದ್ದರು. ಅವರ 2ನೇ ಪತಿ ಶ್ರದ್ಧಾನಂದ ಅವರನ್ನು ವಿಚಾರಣೆ ಮಾಡಿದಾಗ ಸೂಕ್ತ ಉತ್ತರ ನೀಡಲಿಲ್ಲ. ಕೊನೆಗೆ 3 ವರ್ಷ ಕಾಲ ಶ್ರದ್ಧಾನಂದ ಮೇಲೆ ನಿಗಾ ಇರಿಸಿ 1994ರಲ್ಲಿ ಪ್ರಕರಣ ಭೇದಿಸಲಾಯಿತು. ಶ್ರದ್ಧಾನಂದ, ತನ್ನ ಮನೆಯಲ್ಲೇ ಖಲೀಲಿಯನ್ನು ಕೊಲೆ ಮಾಡಿ ಶವ ಹೂತುಹಾಕಿದ್ದ. ಪ್ರಕರಣದ ತನಿಖೆಯು ಸ್ಟಿಂಗ್ ಆಪರೇಷನ್‌ನಲ್ಲಿ ಮೂರು ವರ್ಷಗಳ ಕಾಲ ಒಳಗೊಂಡಿತ್ತು.
ಶೌಖರೆ ಖಲೀಲಿ ಯಾರು?
ಶೌಖರೆ ಖಲೀಲಿ (1947-1991) ಭಾರತೀಯ ಮಹಿಳೆ. ಆಕೆಯ ಎರಡನೇ ಪತಿ ಸ್ವಾಮಿ ಶ್ರದ್ಧಾನಂದರಿಂದ ಕೊಲೆಯಾದರು. 1964ರಲ್ಲಿ ಇರಾನ್ ಮತ್ತು ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ರಾಜತಾಂತ್ರಿಕ ಅಕ್ಬರ್ ಖಲೀಲಿ ಅವರನ್ನು ವಿವಾಹವಾದರು. 1985ರಲ್ಲಿ ವಿಚ್ಛೇದನ ಪಡೆದ ಬಳಿಕ ಶ್ರದ್ಧಾನಂದ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಶೌಖರೆ ಖಲೀಲಿ ಶವವನ್ನು 1994ರಲ್ಲಿ ಆಕೆಯ ಮನೆಯಲ್ಲಿ ಸಮಾಧಿ ಮಾಡಲಾಗಿತ್ತು. ಮಾದಕ ದ್ರವ್ಯ ನೀಡಿ ನಂತರ ಉಸಿರುಗಟ್ಟಿಸಿ, ಶವಪೆಟ್ಟಿಗೆಯಂತಹ ಪೆಟ್ಟಿಗೆಯಲ್ಲಿ ಹೂಳಲಾಯಿತು. 2005ರಲ್ಲಿ ನಡೆದ ಕೊಲೆಯ ಆರೋಪಿ ಶ್ರದ್ಧಾನಂದನಿಗೆ ಮರಣದಂಡನೆ ವಿಧಿಸಲಾಯಿತು. 2008ರಲ್ಲಿ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ನೀಡಲಾಗಿತ್ತು..