ದೇಶವನ್ನೇ ಬೆಚ್ಚಿಬೀಳಿಸಿದ್ದ ʻಶೀನಾ ಬೋರಾ ಕೊಲೆ ಕೇಸ್ʼ ಇದೀಗ ಸಾಕ್ಷ್ಯಚಿತ್ರ ರೂಪದಲ್ಲಿ ಸಿದ್ಧವಾಗಿದೆ. ʻದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರುತ್ʼ ಎಂಬ ಶೀರ್ಷಿಕೆಯಡಿ ʻಶೀನಾ ಬೋರಾ ಕೊಲೆ ಕೇಸ್ʼ ಸಾಕ್ಷ್ಯಚಿತ್ರ ಸಿರೀಸ್ ಫೆಬ್ರವರಿ 23ರಂದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ಸೋಮವಾರ (ಜ.29) ಪೋಸ್ಟರ್ ಅನ್ನು ಬಹಿರಂಗಪಡಿಸಿದೆ. ಪೋಸ್ಟರ್‌ನಲ್ಲಿ ಇಂದ್ರಾಣಿಯ ಅರ್ಧ ಮುಖವಿದೆ. ಇದೀಗ ಈ ಪೋಸ್ಟರ್ ಕಂಡು ನೋಡುಗರು ಥ್ರಿಲ್ ಆಗಿದ್ದಾರೆ.
ಶೀನಾ ಬೋರಾ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ ಸರಣಿಯ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ಇನ್‌ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ ಹೀಗೆ ಬರೆದಿದೆ, “ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಹಗರಣ, ಒಂದು ಕುಟುಂಬದ ಕರಾಳ ರಹಸ್ಯಗಳು. ಇಂದ್ರಾಣಿ ಮುಖರ್ಜಿ ಸ್ಟೋರಿ ಬರಿಡ್ ಟ್ರುತ್, ಫೆಬ್ರವರಿ 23 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಬರಲಿದʼʼಎಂದು ಬರೆದುಕೊಂಡಿದೆ. ಈ ಸಿರೀಸ್ ʻಅನ್‌ಬ್ರೋಕನ್: ದಿ ಅನ್‌ಟೋಲ್ಡ್ ಸ್ಟೋರಿʼ ಬುಕ್‌ನ ಆತ್ಮಚರಿತ್ರೆಯಾಗಿದೆ. 2023ರಲ್ಲಿ ಈ ಪುಸ್ತಕ ಪ್ರಕಟವಾಗಿತ್ತು. ಈ ಸಿರೀಸ್‌ನಲ್ಲಿ ಇಂದ್ರಾಣಿ ಮುಖರ್ಜಿ, ಅವರ ಮಕ್ಕಳು, ಅನುಭವಿ ಪತ್ರಕರ್ತರು ಮತ್ತು ಕಾನೂನು ವೃತ್ತಿಪರರ ಹೋರಾಟಗಳು ಒಳಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಶೀನಾ ಬೋರಾ ಕೊಲೆ ಕೇಸ್: ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು
ಏನಿದು ಶೀನಾ ಬೋರಾ ಕೊಲೆ ಕೇಸ್?
ದೇಶವನ್ನೇ ಬೆಚ್ಚಿಬೀಳಿಸಿದ್ದ ಶೀನಾ ಬೋರಾ ಕೊಲೆ ಕೇಸ್ ಪ್ರಮುಖ ಆರೋಪಿ, ಆಕೆಯ ತಾಯಿ ಇಂದ್ರಾಣಿ ಮುಖರ್ಜಿಗೆ ಈಗಾಗಲೇ ಕೋರ್ಟ್ ಜಾಮೀನು ನೀಡಿದೆ. ʼಆರೂವರೆ ವರ್ಷಗಳಿಂದ ಇಂದ್ರಾಣಿ ಮುಖರ್ಜಿ ಜೈಲಿನಲ್ಲಿದ್ದರು. 2012ರಲ್ಲಿ ನಡೆದ ಶೀನಾ ಬೋರಾ ಹತ್ಯೆ ಪ್ರಕರಣದಡಿ 2015ರಲ್ಲಿ ಇಂದ್ರಾಣಿ ಮುಖರ್ಜಿ ಬಂಧಿತರಾಗಿದ್ದರು. 2012ರಲ್ಲಿ ಶೀನಾ ಬೋರಾ ಮೃತದೇಹ ಜಮ್ಮು-ಕಾಶ್ಮೀರದ ದಾಲ್ ಲೇಕ್ ಬಳಿ ಪತ್ತೆಯಾಗಿತ್ತು. ಈ ಶೀನಾ ಬೋರಾ ಪ್ರಕರಣ ತುಂಬ ಸಂಕೀರ್ಣವಾದ ಕೇಸ್ ಆಗಿದೆ. ಇಂದ್ರಾಣಿ ಮುಖರ್ಜಿಗೆ ಮೊದಲ ಪತಿ ಸಿದ್ಧಾರ್ಥ್ ದಾಸ್‌ರಿಂದ ಹುಟ್ಟಿದ ಮಗಳು ಈ ಶೀನಾ ಬೋರಾ.
ಬಳಿಕ ಇಂದ್ರಾಣಿ ಸಿದ್ಧಾರ್ಥ್‌ರನ್ನು ಬಿಟ್ಟು, 1993ರಲ್ಲಿ ಸಂಜೀವ್ ಖನ್ನಾ ಎಂಬಾತನನ್ನು ಮದುವೆಯಾಗುತ್ತಾರೆ. ಬಳಿಕ ಆತನನ್ನೂ ಬಿಟ್ಟು 2002ನೇ ಇಸ್ವಿಯಲ್ಲಿ ಪೀಟರ್ ಮುಖರ್ಜಿಯವರೊಂದಿಗೆ ವಿವಾಹವಾಗುತ್ತಾರೆ. ಈ ಪೀಟರ್ ಮುಖರ್ಜಿಗೆ ಮೊದಲ ಪತ್ನಿಯಿಂದ ಹುಟ್ಟಿದ ಮಗ ರಾಹುಲ್ ಮುಖರ್ಜಿ ಮತ್ತು ಶೀನಾ ಬೋರಾ ಪ್ರೀತಿಸಲು ಶುರು ಮಾಡುತ್ತಾರೆ. ಇಂದ್ರಾಣಿ ಇದನ್ನು ಬಲವಾಗಿ ವಿರೋಧಿಸುತ್ತಾಳೆ. ಈ ಮಧ್ಯೆ ಶೀನಾ ತನ್ನ ಮಗಳು ಎಂಬ ವಿಚಾರವನ್ನು ಇಂದ್ರಾಣಿ ಮುಚ್ಚಿಟ್ಟು, ತನ್ನ ತಂಗಿ ಎಂದೇ ನಂಬಿಸಿದ್ದರು. ಇದೇ ವಿಚಾರವಾಗಿ ಶೀನಾ, ಇಂದ್ರಾಣಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಒಟ್ಟಾರೆ ಎಲ್ಲದಕ್ಕೂ ಅಂತ್ಯವೆಂಬಂತೆ ಶೀನಾ ಬೋರಾ ಹತ್ಯೆಯಾಗಿತ್ತು. ಈ ಕೊಲೆಯನ್ನು ಇಂದ್ರಾಣಿ ತಮ್ಮ ಎರಡನೇ ಪತಿ ಸಂಜಯ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್‌ವರ್ ರೈ ಸಹಾಯದಿಂದ ಮಾಡಿದ್ದಾರೆ ಎಂಬ ಆರೋಪದಡಿ 2015ರಲ್ಲಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.