ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ (Pamela Chopra) ಅವರು ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. 85 ವಯಸ್ಸಿನ ಪಮೇಲಾ ಅವರು ಹಿನ್ನೆಲೆ ಗಾಯಕಿ, ಚಲನಚಿತ್ರ ಬರಹಗಾರ್ತಿ ಹಾಗೂ ನಿರ್ಮಾಪಕಿ ಆಗಿ ಗುರುತಿಸಿಕೊಂಡಿದ್ದರು.
ಪಮೇಲಾ ಅವರು ಅನಾರೋಗ್ಯದಿಂದ ಬಳಲಿದ್ದು ಕಳೆದ 15 ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಗಂಭೀರವಾಗಿ ಹಾಳಾಗಿದ್ದರಿಂದಾಗಿ ಅವರಿಗೆ ವೆಂಟಿಲೇಟರ್ ಹಾಕಲಾಗಿತ್ತು ಎಂದು ವರದಿಯಿದೆ.
ಪಮೇಲಾ ಚೋಪ್ರಾ ಅವರು ಕೊನೆಯದಾಗಿ ವೈಆರ್‌ಎಫ್ ಸಾಕ್ಷ್ಯಚಿತ್ರವಾದ ʼದಿ ರೊಮ್ಯಾಂಟಿಕ್ಸ್ʼನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ತಮ್ಮ ಪತಿ ಯಶ್ ಚೋಪ್ರಾ ಮತ್ತು ಅವರ ಜೀವನ ಪ್ರಯಾಣದ ಬಗ್ಗೆ ಮಾತನಾಡಿದ್ದರು. ದಿ ರೊಮ್ಯಾಂಟಿಕ್ಸ್ ಹಿಂದಿ ಚಲನಚಿತ್ರೋದ್ಯಮಕ್ಕೆ ಯಶ್ ಚೋಪ್ರಾ ಹಾಗೂ ಪಮೇಲಾ ನೀಡಿದ ಕೊಡುಗೆಗಳ ಮೇಲೆ ಕೇಂದ್ರೀಕರಿಸಿದ ಸಾಕ್ಷ್ಯಚಿತ್ರವಾಗಿತ್ತು.
ಇದನ್ನೂ ಓದಿ: Jon Peters Will: ಕೇವಲ 12 ದಿವಸದ ದಾಂಪತ್ಯ, ಪರಿತ್ಯಕ್ತ ಗಂಡನಿಂದ ನಟಿ ಪಮೇಲಾಗೆ ಸಿಕ್ಕಿತು 82 ಕೋಟಿ ರೂ. ಪರಿಹಾರ!
ಪಮೇಲಾ 1970 ರಲ್ಲಿ ಯಶ್ ಚೋಪ್ರಾ ಅವರನ್ನು ವಿವಾಹವಾದರು. ಅವರಿಗೆ ಆದಿತ್ಯ ಮತ್ತು ಉದಯ್ ಚೋಪ್ರಾ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಆದಿತ್ಯ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದು, ಬಾಲಿವುಡ್ ರಾಣಿ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಉದಯ್ ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ.
ಪಮೇಲಾ ಚೋಪ್ರಾ ಹಲವಾರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಪತಿಯ ಸಿನಿಮಾಗಳಿಗೇ ಹಾಡುಗಳನ್ನು ಹಾಡಿದ್ದಾರೆ. 1976ರ ಕಭಿ ಕಭಿ ಸಿನಿಮಾದಿಂದ 2002ರ ಮುಜ್ಸೆ ದೋಸ್ತಿ ಕರೋಗೆ! ಹಲವು ಸಿನಿಮಾಗಳಲ್ಲಿ ಪಮೇಲಾ ಅವರ ಹಾಡುಗಳನ್ನು ಕೇಳಬಹುದಾಗಿದೆ. ಹಾಗೆಯೇ 1993ರಲ್ಲಿ ಐನಾ ಚಲನಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಅವರು ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡರು. ಪಮೇಲಾ ತಮ್ಮ ಪತಿಯ ಚಿತ್ರವಾದ ದಿಲ್ ತೋ ಪಾಗಲ್ ಹೈ ಚಿತ್ರದ ಸ್ಕ್ರಿಪ್ಟ್ ಅನ್ನೂ ಸಹ ಬರೆದಿದ್ದಾರೆ. ಅದೇ ಚಿತ್ರದ ಆರಂಭಿಕ ಗೀತೆ ಏಕ್ ದುಜೆ ಕೆ ವಾಸ್ತೆಯಲ್ಲಿ ಪತಿಯೊಂದಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು ಕೂಡ.