ನಟಿಯರಾದ ಪಾರ್ವತಿ ಮೆನನ್ ಮತ್ತು ನಿತ್ಯಾ ಮೆನನ್ ಇಬ್ಬರೂ ತಾವು ಗರ್ಭಿಣಿಯರು ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಇಬ್ಬರು ಬಹುತೇಕ ಒಂದೇ ಸಮಯದಲ್ಲಿ ಇನ್ಸ್ಟಾದಲ್ಲಿ ‘ಪ್ರೆಗ್ನೆನ್ಸಿ ಟೆಸ್ಟ್ ಕಿಟ್ (ಗರ್ಭಧಾರಣೆ ಪರೀಕ್ಷಾ ಕಿಟ್) ಮತ್ತು ಬೇಬಿ ನಿಪ್ಪಲ್’ ಫೋಟೋ ಶೇರ್ ಮಾಡಿಕೊಂಡು ‘ಒಂದು ಅಚ್ಚರಿ ಪ್ರಾರಂಭವಾಗಿದೆ’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಹಾಗೇ, ಅಲ್ಲೇ ಒಂದು ಗರ್ಭಿಣಿಯ ಇಮೊಜಿಯನ್ನು ಹಾಕಿದ್ದಾರೆ.
ಇಬ್ಬರೂ ಮದುವೆಯಾಗದ ನಟಿಯರು, ಹೀಗೆ ಇನ್ಸ್ಟಾಗ್ರಾಂನಲ್ಲಿ ಏಕಾಏಕಿ ತಾವು ಗರ್ಭಿಣಿಯರು ಎಂದು ಘೋಷಿಸಿಬಿಟ್ಟರೆ ಏನಾಗಬೇಡ? ಅವರ ಪೋಸ್ಟ್ಗಳಿಗೆ ಕಮೆಂಟ್ಗಳೂ ಕೂಡ ಅದೇ ಅರ್ಥದಲ್ಲಿ ಬರತೊಡಗಿದ್ದವು. ಇನ್ನು ವಿವಾಹ ಆಗದೆ ಗರ್ಭಿಣಿಯರು ಆದಿರಾ? ಎಂದು ಅನೇಕರು ನೇರವಾಗಿಯೇ ಪ್ರಶ್ನಿಸಿದ್ದಾರೆ. ಅದರಲ್ಲೂ ಪಾರ್ವತಿ ಮೆನನ್ ಹಾಕಿದ ಪೋಸ್ಟ್ಗೆ ಗಾಯಕಿ ಲಿಸಾ ಮಿಶ್ರಾ ಕಮೆಂಟ್ ಮಾಡಿ ‘ನಾನು ಆಂಟಿ ಆಗುತ್ತಿದ್ದೇನಾ?’ ಎಂದು ಕೇಳಿದ್ದಾರೆ. ‘ಓ ಮೈ ಗಾಡ್, ಅಭಿನಂದನೆಗಳು ಎಂದು ಸ್ವರಾ ಭಾಸ್ಕರ್ ಬರೆದಿದ್ದಾರೆ. ಒಂದಷ್ಟು ಜನ ಅಭಿನಂದನೆ ಸಲ್ಲಿಸುತ್ತಿದ್ದರೆ, ಮತ್ತೊಂದಷ್ಟು ಜನ ಆಶ್ಚರ್ಯ, ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ವಾಸ್ತವ ಏನೆಂದರೆ, ಪಾರ್ವತಿ ಮೆನನ್ ಆಗಲೀ, ನಿತ್ಯಾ ಮೆನನ್ ಆಗಲೀ ನಿಜಕ್ಕೂ ಗರ್ಭಿಣಿಯರು ಅಲ್ಲ. ಇವರಿಬ್ಬರೂ ತಮ್ಮ ಮುಂದಿನ ಸಿನಿಮಾವನ್ನು ಹೀಗೆ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ನಿತ್ಯಾ ಮತ್ತು ಪಾರ್ವತಿ ಒಟ್ಟಾಗಿ ‘ವಂಡರ್ ವುಮೆನ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಹೀಗೆ ಶುರುವಿನಲ್ಲಿ ಒಂದು ಝಲಕ್ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾ ಪ್ರಮೋಶನ್ಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಬಗ್ಗೆ ಇನ್ನೂ ಏನೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ಈ ಚಲನಚಿತ್ರದ ಬಗ್ಗೆ ಎಲ್ಲ ವಿವರ ಬಹಿರಂಗಗೊಳ್ಳಲಿದೆ ಎಂದೂ ಹೇಳಲಾಗಿದೆ.
ಇಷ್ಟಾದರೂ ನೆಟ್ಟಿಗರು ಅದನ್ನು ಸಿನಿಮಾ ಪ್ರಮೋಶನ್ ಎಂದು ಪೂರ್ತಿಯಾಗಿ ಒಪ್ಪುತ್ತಿಲ್ಲ. ಮದುವೆಯಾಗದೆ ಮಕ್ಕಳನ್ನು ಮಾಡಿಕೊಳ್ಳುವುದು ಅನೈತಿಕ. ಇದು ಭಾರತದ ಸಂಸ್ಕೃತಿಯಲ್ಲ. ಮದುವೆಯಾಗಿ ಮಕ್ಕಳಾದ ಮೇಲೆ ಗಂಡ-ಹೆಂಡತಿ ದೂರವಾಗಿ ಸಿಂಗಲ್ ಪೇರೆಂಟ್ ಎನ್ನಿಸಿಕೊಳ್ಳುವುದು ಬೇರೆ, ಹೀಗೆ ಮದುವೆಗೆ ಮುನ್ನವೇ ಮಕ್ಕಳನ್ನು ಪಡೆಯುವುದೇ ಬೇರೆ..ಇದು ಸರಿಯಲ್ಲ ಎಂದು ಚರ್ಚಿಸುತ್ತಿದ್ದಾರೆ. ನಿತ್ಯಾ ಮೆನನ್ ಮತ್ತು ಪಾರ್ವತಿ ಮೆನನ್ ವಿರುದ್ಧ ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: 777 Charlie | ಸ್ಯಾಂಡಲ್‌ವುಡ್‌ನ ನೆಚ್ಚಿನ ‘ಸಿಂಬಾ’ ಇನ್ನಿಲ್ಲ..