ಬೆಂಗಳೂರು: ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾಲ. ಒಂದೇ ಸಿನಿಮಾ ಇಡೀ ದೇಶವನ್ನು ತುದಿಗಾಲಿನಲ್ಲಿ ನಿಲ್ಲಿಸುವಷ್ಟು ಪವರ್ ಮತ್ತು ಪ್ರೆಸೆಂಟೇಷನ್ ಹೊಂದಿರಬೇಕು ಎನ್ನುವುದು ಪ್ಯಾನ್ ಇಂಡಿಯಾ ಕಲ್ಪನೆಯ ಮೂಲ ಹೂರಣ. ಹಿಂದೆ ಕೆಲವೇ ಬಾಲಿವುಡ್ ಸಿನಿಮಾಗಳು ಮಾತ್ರ ಇಡೀ ದೇಶವನ್ನು ಆಕ್ರಮಿಸಿಕೊಂಡು ಮನೆ ಮನೆಯನ್ನು ತಲುಪುತ್ತಿದ್ದವು. ಅದಕ್ಕಿದ್ದ ಭಾಷಾ ಶಕ್ತಿ, ತಾರಾ ಆಕರ್ಷಣೆಗಳು ಅವುಗಳನ್ನು ದೇಶವ್ಯಾಪಿ ಹಿಟ್ ಮಾಡಿಸುತ್ತಿದ್ದವು. ಮುಂದೆ ತೆಲುಗು ಮತ್ತು ತಮಿಳು ಭಾಷಾ ಚಿತ್ರಗಳು ಉತ್ತರದಲ್ಲೂ ಅಬ್ಬರಿಸಲು ಶುರು ಮಾಡಿದವು. ಈಗ ಅವೆಲ್ಲವನ್ನೂ ಮೀರಿ ಕನ್ನಡ ಚಿತ್ರಗಳು ದೇಶಾದ್ಯಂತ ಜಬರ್ದಸ್ತ್ ಆಗಿ ಮೆರೆಯುತ್ತಿದೆ. ಕೆಜಿಎಫ್-೨ ಚಿತ್ರವಂತೂ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲ ಚಿಂದಿ ಮಾಡಿದೆ. ಇನ್ನೂ ಹಲವು ಚಿತ್ರಗಳು ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿವೆ.
ಹಾಗಿದ್ದರೆ, ಹಿಂದೆಲ್ಲ ಕನ್ನಡದಲ್ಲಿ ಪ್ಯಾನ್ ಇಂಡಿಯಾದಲ್ಲಿ ಮಿಂಚಬಹುದಾಗಿದ್ದ ಕನ್ನಡ ಚಿತ್ರಗಳು ಬರುತ್ತಿರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ನಿಜವೆಂದರೆ, ಕನ್ನಡ ಚಿತ್ರರಂಗ ಬಹು ಹಿಂದಿನಿಂದಲೇ ಇಡೀ ದೇಶವೇ ತಿರುಗಿ ನೋಡುವಂಥ, ಭಾಷೆ, ಜನ, ವರ್ಗಗಳನ್ನು ಮೀರಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಬಹುದಾದ ಚಿತ್ರಗಳನ್ನು ಸೃಷ್ಟಿಸಿದೆ. ಅದರಲ್ಲೂ ಉಪೇಂದ್ರ ನಿರ್ದೇಶನ ಮಾಡಿದ ಹಲವು ಚಿತ್ರಗಳು, ಶಿವರಾಜ್ ಕುಮಾರ್ ಅಭಿನಯದ ಸಿನಿಮಾಗಳು ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಬಲ್ಲ ಚಿತ್ರಗಳೇ ಆಗಿದ್ದವು. ಆದರೆ, ಆಗೆಲ್ಲ ಇವುಗಳನ್ನು ಮಾರುಕಟ್ಟೆ ಮಾಡುವಷ್ಟು ಯೋಚನೆಗಳನ್ನು ಮಾಡಿರಲಿಲ್ಲ. ಈಗಿನ ಹಾಗೆ ಪ್ಯಾನ್ ಇಂಡಿಯಾ ಕನಸುಗಳೂ ಇರಲಿಲ್ಲ. ಇದ್ದಿದ್ದರೆ ಈ ಕೆಳಗೆ ಹೇಳಿದ ಮತ್ತು ಹೇಳದೆ ಇರುವ ಇನ್ನೂ ಹಲವು ಚಿತ್ರಗಳು ಆಗಲೇ ಪ್ಯಾನ್ ಇಂಡಿಯಾದಲ್ಲಿ ಹುಡಿ ಹಾರಿಸುತ್ತಿದ್ದವು.
1. ‘ಎ’ ಚಿತ್ರ (A Film)
1998ರಲ್ಲಿ ತೆರೆಗೆ ಬಂದ ಉಪೇಂದ್ರ ನಿರ್ದೇಶನದ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ‘ಎ’. ಒಬ್ಬ ಸಿನಿಮಾ ನಿರ್ದೇಶಕ ಮತ್ತು ನಾಯಕಿ ನಡುವಿನ ಪ್ರೇಮ ಕಥೆಯನ್ನು ಹೊಂದಿರುವ, ರಿವರ್ಸ್ ಸ್ಕ್ರೀನ್ ಪ್ಲೇ ಹೊಂದಿರುವ ಈ ಸಿನಿಮಾ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕಥನವನ್ನು, ರಾಜಕೀಯವನ್ನು ೨೪ ವರ್ಷಗಳ ಹಿಂದೆಯೇ ತೆರೆದಿಟ್ಟಿತ್ತು. ಸಿನಿಮಾರಂಗದ ಕಹಿ ಸತ್ಯಗಳನ್ನು ಹಸಿಹಸಿಯಾಗಿ ತೆರೆದಿಟ್ಟಿದ್ದ ಈ ಸಿನಿಮಾ ಭಾಷೆಗಳ ಹಂಗಿಲ್ಲದೆ ಗೆಲ್ಲಬಲ್ಲ ತಾಕತ್ತನ್ನು ಹೊಂದಿತ್ತು.
ಇದನ್ನೂ ಓದಿ | Cinedubs Mobile App | ವಿಕ್ರಾಂತ್ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್ ಆ್ಯಪ್; ಏನಿದರ ವಿಶೇಷತೆ?
ಉಪೇಂದ್ರ ಅವರು ಈ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ (1998) ಮತ್ತು ಗುರುಕಿರಣ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ (1998) ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ₹1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ₹20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಕರ್ನಾಟಕದಲ್ಲಿ 25 ವಾರಗಳ ಯಶಸ್ವಿ ಪ್ರದರ್ಶನ ಕಂಡ ʻಎʼ ತೆಲುಗಿನಲ್ಲಿ ಶತ ದಿನೋತ್ಸವ ಆಚರಿಸಿತ್ತು.
2. ಉಪೇಂದ್ರ ಸಿನಿಮಾ
ಮಾನವ ಸಂಬಂಧಗಳನ್ನು ಪಾತ್ರಗಳ ಮೂಲಕ ಪ್ರೆಸೆಂಟ್ ಮಾಡಿದ ಉಪೇಂದ್ರ ಅವರ ಮತ್ತೊಂದು ಸೈಕಲಾಜಿಕಲ್ ಸಿನಿಮಾ. ೧೯೯೯ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಪ್ರಧಾನ ಪಾತ್ರಧಾರಿಯ ಜತೆ ಮೂವರು ನಾಯಕಿಯರು ಹೊಂದಿರುವ ಸಂಬಂಧಗಳ ಕಥಾನಕವಿದೆ. ಉಪೇಂದ್ರ, ಪ್ರೇಮಾ, ದಾಮಿನಿ ಮತ್ತು ರವೀನಾ ಚಿತ್ರದಲ್ಲಿ ನಟಿಸಿದ್ದರು. ಈ ನಟ ಮತ್ತು ನಾಯಕಿಯರ ಹೆಸರನ್ನು ಸೇರಿಸಿದರೂ ಉಪೇಂದ್ರ ಎಂದೇ ಆಗುತ್ತದೆ. ಆ ಮಟ್ಟಿಗಿನ ಲೆಕ್ಕಾಚಾರದಲ್ಲಿ ಉಪೇಂದ್ರ ಈ ಚಿತ್ರವನ್ನು ಕಟ್ಟಿದ್ದರು. ಉಪೇಂದ್ರ ಅವರೇ ಸಾಹಿತ್ಯ ಬರೆದು, ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ ಸಿನಿಮಾ ಇದು. ಚಿತ್ರದ ಪ್ರತಿ ಹಾಡೂ ಹಿಟ್ ಆಗಿತ್ತು.
ಈ ಚಿತ್ರ 1999ರಲ್ಲಿ ಫಿಲ್ಮ್‌ಫೇರ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. 2001ರಲ್ಲಿ ಜಪಾನ್‌ನಲ್ಲಿ ನಡೆದ ಯುಬಾರಿ ಇಂಟರ್‌ನ್ಯಾಶನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರ ಪ್ರದರ್ಶನಗೊಂಡಿತ್ತು.
3. ಉಳಿದವರು ಕಂಡಂತೆ
ಸಿನಿಮಾ ನಿರ್ಮಾಣದಲ್ಲೇ ಒಂದು ಹೊಸ ಕ್ರಾಂತಿ ಮಾಡಿದ ಪಕ್ಕಾ ʻಸ್ಕ್ರಿಪ್ಟೆಡ್ʼ ಚಿತ್ರ ಇದು. ಪ್ಯಾನ್ ಇಂಡಿಯಾಕ್ಕೆ ಹೇಳಿ ಮಾಡಿಸಿದ ಸಬ್ಜೆಕ್ಟ್ ಮತ್ತು ನಿರ್ಮಾಣ. ಮುಂಬಯಿ ಭೂಗತ ಲೋಕ ಮತ್ತು ಕರ್ನಾಟಕ ಕರಾವಳಿಯ ಪುಟ್ಟ ಮೀನುಗಾರಿಕಾ ಪಟ್ಟಣವೊಂದರ ನಡುವಿನ ಕ್ರಿಮಿನಲ್ ಸಂಬಂಧದ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಅಭಿನಯಿಸಿದ ಈ ಸಿನಿಮಾ ಅವರು ನಿರ್ದೇಶಿಸಿದ ಮೊದಲ ಚಿತ್ರವೂ ಹೌದು.
4. ಉಗ್ರಂ
ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಬ್ಬರಿಸಿದ ಈ ಚಿತ್ರ 2004ರಲ್ಲಿ ತೆರೆ ಕಂಡಿತ್ತು. ಕೆಜಿಎಫ್‌ನಂಥ ಅದ್ಧೂರಿ ಚಿತ್ರವನ್ನು ಕಟ್ಟಿಕೊಟ್ಟ ಪ್ರಶಾಂತ್ ನೀಲ್ ಚೊಚ್ಚಲ ನಿರ್ದೇಶನದ ಸಿನಿಮಾ ಇದು. ಒಬ್ಬ ಅತಿಸಾಮಾನ್ಯ ವ್ಯಕ್ತಿ ಕ್ರೈಮ್ ಸಿಂಡಿಕೇಟ್‌ನೊಳಗೆ ಸಿಕ್ಕಿಹಾಕಿಕೊಳ್ಳುವ ಈ ಚಿತ್ರ ಯಾವುದೇ ಭಾರತೀಯ ಭಾಷೆಗೂ ಹೊಂದಿಕೊಳ್ಳಬಲ್ಲ ಕಂಟೆಂಟ್ ಹೊಂದಿದೆ. ಈ ಚಿತ್ರದಲ್ಲಿ ಸನ್ನಿವೇಶಗಳು, ಆಕ್ಷನ್ ಸೀಕ್ವೆನ್ಸ್‌ಗಳು ಇದರಲ್ಲಿವೆ. ಇದು ಭಾರತ್ ಗೋಲ್ಡ್ ಮೈನ್ಸ್‌ನ ಸೈನೈಡ್ ಡಂಪ್‌ನಲ್ಲಿ ಚಿತ್ರಿಸಿದ ಮೊದಲ ಚಲನಚಿತ್ರ. ಬಿಡುಗಡೆಯಾದ ಮೊದಲ ವಾರವೇ ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ರೂ. ಬಾಚಿಕೊಂಡಿತು.
5. ಟಗರು
2018ರಲ್ಲಿ ತೆರೆಕಂಡ ಈ ಸಿನಿಮಾ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ನಟಿಸಿರುವ ಚಿತ್ರ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ 100 ದಿನಗಳನ್ನು ಪೂರೈಸಿ ಯಶಸ್ವಿ ಪ್ರದರ್ಶನ ಕಂಡಿತು. 66ನೇ ಫಿಲ್ಮ್‌ಫೇರ್ ಪ್ರಶಸ್ತಿ, ದೊರೆತಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ದರೋಡೆಕೋರರನ್ನು ಒಂದುಗೂಡಿಸುವ ಸಂಬಂಧದ ನಿರೂಪಣೆಯೊಂದಿಗೆ ಕಥೆ ಸಾಗುತ್ತದೆ.
6. ರಂಗಿತರಂಗ
2015ರಲ್ಲಿಈ ಚಿತ್ರ ತೆರೆಗೆ ಬಂದಿದ್ದು, ಅನೂಪ್ ಭಂಡಾರಿ ಚಿತ್ರವನ್ನು ನಿರ್ದೇಶಿದ್ದಾರೆ. ರಂಗಿತರಂಗವು ಕರ್ನಾಟಕದ ಕರಾವಳಿ ಪ್ರದೇಶದ ಕಾಲ್ಪನಿಕ ಗ್ರಾಮವಾದ ಕಮರೊಟ್ಟು ಗ್ರಾಮದ ಕಥಾ ಹಂದರ ಹೊಂದಿದೆ. ಸೈಮಾ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.
ರಂಗಿತರಂಗ ದಿ ನ್ಯೂಯಾರ್ಕ್ ಟೈಮ್ಸ್‌ನ ವಾರಾಂತ್ಯದ ಬಾಕ್ಸ್ ಆಫೀಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಕನ್ನಡ ಚಲನಚಿತ್ರವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ಬಾಹುಬಲಿ ಚಿತ್ರಕ್ಕೆ ಸೆಡ್ಡು ಹೊಡೆದಿತ್ತು. ಸೆಪ್ಟೆಂಬರ್ ಅಂತ್ಯದ ವೇಳೆಗೆ, ಇದು ಅಮೆರಿಕಾದಲ್ಲಿ 50 ದಿನಗಳ ಪ್ರದರ್ಶನವನ್ನು ಪೂರೈಸಿದ ಸಿನಿಮಾ ಆಗಿದೆ. ಹಾಗೂ 21 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತು.
7. ನಿಷ್ಕರ್ಷ ಸಿನಿಮಾ
ನಟ ವಿಷ್ಣುವರ್ಧನ್ ಅವರ 1993ರಲ್ಲಿ ತೆರೆ ಕಂಡ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಥ್ರಿಲರ್ ಜಾನರ್ ಹೊಂದಿದ ಸಿನಿಮಾ ಆಗಿದೆ. ಆ ಸಮಯದಲ್ಲಿಯೇ 60 ಲಕ್ಷ ಬಜೆಟ್ ಸಿನಿಮಾ ಇದಾಗಿತ್ತು. ವಿಶೇಷ ಅಂದರೆ ಹಾಡುಗಳೇ ಇಲ್ಲದ ಈ ಸಿನಿಮಾವನ್ನು ಹಂಚಿಕೆದಾರರೂ ಕೊಳ್ಳಲು ಮುಂದೆ ಬಂದಿರುತ್ತಿರಲಿಲ್ಲ. ಆದರೂ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತು.
8. ಹಾಲಿವುಡ್ ಸಿನಿಮಾ
2002ರಲ್ಲಿ ಉಪೇಂದ್ರ ಅವರು ಬರೆದು, ದಿನೇಶ್ ಬಾಬು ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಆಂಡ್ರಾಯ್ಡ್ ರೋಬೋಟ್ ಪಾತ್ರವನ್ನು ನಿಭಾಯಿಸಿದ್ದರು.
9. ಓಂ ಸಿನಿಮಾ
1995ರಲ್ಲಿ ಬಿಡುಗಡೆಗೊಂಡ ಓಂ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ ಹಾಗೂ ಪ್ರೇಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಇನ್ನೂ ವಿಶೇಷ ಎಂದರೆ ಡಾ.ರಾಜ್‌ಕುಮಾರ್ ಅವರು ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿ, ತೆಲಗುವಿನಲ್ಲಿ ರಿಮೇಕ್ ಮಾಡಲಾಯಿತು. ರೌಡಿಸಂನ ಕುರಿತ ಸತ್ಯ ಘಟನೆಯಾಧಾರಿತ ಚಿತ್ರ ಇದಾಗಿದೆ.
ಸುಮಾರು 70 ಲಕ್ಷ ಬಜೆಟ್‌ನಲ್ಲಿ ತಯಾರಾದ ಚಿತ್ರ ಆ ಸಮಯದಲ್ಲಿಯೇ ಡಾ.ರಾಜ್ ಬ್ಯಾನರ್‌ಗೆ ಅತ್ಯಂತ ದುಬಾರಿ ಚಿತ್ರವಾಗಿತ್ತು. ಇದು ಸುಮಾರು 2 ಕೋಟಿಗಳಷ್ಟು ಪ್ರೀ-ರಿಲೀಸ್ ವ್ಯವಹಾರವನ್ನು ಮಾಡಿತು.
ಈ ಚಿತ್ರವು 550ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾಗಿ, ಲಿಮ್ಕಾ ದಾಖಲೆಯನ್ನು ಮಾಡಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರವು 30 ಬಾರಿ ಬಿಡುಗಡೆಯಾಗಿದ್ದು ದಾಖಲೆಯಾಗಿದೆ.
10. ಲೂಸಿಯಾ ಸಿನಿಮಾ
ಮನೋವೈಜ್ಞಾನಿಕ ಕಥಾ ಹಂದರ ಹೊಂದಿರುವ ಈ ಸಿನಿಮಾ ಪವನ್ ಒಡೆಯರ್ ನಿರ್ದೇಶಿಸಿ, ಸತೀಶ್ ನೀನಾಸಂ, ಶೃತಿ ಹರಿಹರನ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಂಡನ್‌ನಲ್ಲಿ ನಡೆದ ಭಾರತೀಯ ಚಲನಚಿತ್ರ ಉತ್ಸವದಲ್ಲಿ ಮೆಚ್ಚುಗೆ ಪಡೆಯಿತು. ಮತ್ತು ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲ ಬಾರಿಗೆ ಪ್ರೇಕ್ಷಕರೇ ನಿರ್ಮಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ದೇಶ, ವಿದೇಶಗಳಲ್ಲಿ ಬಿಡುಗಡೆಗೊಂಡು ಜನಮನ್ನಣೆ ಪಡೆದುಕೊಂಡಿತು.
11. ಭಕ್ತ ಪ್ರಹ್ಲಾದ
ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅಭಿನಯದ ಭಕ್ತ ಪ್ರಹ್ಲಾದ ಸಿನಿಮಾ 1983ರಲ್ಲಿ ಬಿಡುಗಡೆಗೊಂಡಿತು. ಈ ಸಿನಿಮಾ ಛಾಯಾಗ್ರಹಣಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿತು. ಇದು ತೆಲುಗಿನಲ್ಲಿ ರಿಮೇಕ್ ಆಗಿದೆ. ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಟಿಸಿದ್ದು, ಜನಮನ್ನಣೆ ಪಡೆಯಿತು.ಇದರ ಜತೆಗೆ, ಡಾ.ರಾಜ್‌ಕುಮಾರ್ ಅವರ ಅನೇಕ ಪೌರಾಣಿಕ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?