ಬೆಂಗಳೂರು : ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದಲ್ಲಿ (Pathaan Controversy) ಕೇಸರಿ ಬಿಕಿನಿ ತೊಟ್ಟಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂದರ್ಶನವೊಂದರಲ್ಲಿ ನುಸ್ರತ್ ಮಾತನಾಡಿ ʻʻಇದು ಯಾರ ಸಿದ್ಧಾಂತದ ಬಗ್ಗೆ ಅಲ್ಲ. ಇದು ಅಧಿಕಾರದಲ್ಲಿರುವ ಒಂದು ಪಕ್ಷದ ಜನರ ಗುಂಪಿನವರು ಮಾಡುತ್ತಿರುವ ಪಿತೂರಿ. ಇಲ್ಲಿ ಅವರು ಏನು ಮಾಡಲು ಹೋರಟಿದ್ದಾರೆ, ಈ ವಿಚಾರದಲ್ಲಿ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ತರುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರದ ಬೆಂಬಲ ಇದೆ. ಮಹಿಳೆಯರು ಹಿಜಾಬ್ ಧರಿಸುವುದರಲ್ಲಿ ಅವರಿಗೆ ಸಮಸ್ಯೆಯಿದೆ. ಮಹಿಳೆಯರು ಬಿಕಿನಿ ಧರಿಸುವುದರಲ್ಲಿ ಅವರಿಗೆ ಸಮಸ್ಯೆಯಿದೆ. ಭಾರತದ ಹೊಸ ಯುಗದ ಹೆಣ್ಣುಮಕ್ಕಳಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ” ಎಂದು ಜಹಾನ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Pathaan Controversy | ಕೇಸರಿ ಬಣ್ಣಕ್ಕೆ ಬೂಟುಗಾಲಿಟ್ಟ ಕಂಗನಾ ರಣಾವತ್: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ!
“ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ನಮ್ಮ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ದೀರ್ಘಾವಧಿಯಲ್ಲಿ ಅದು ನಮ್ಮೆಲ್ಲರನ್ನೂ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲʼʼ ಎಂದು ಅವರು ಹೇಳಿಕೆ ನೀಡಿದ್ದಾರೆ.
ಏನಿದು ವಿವಾದ?
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿದೆ. ಇದು ಬೇಕು ಎಂತಲೇ ಮಾಡಿದ ಹುನ್ನಾರ ಎಂದು ಹಿಂದುಪರ ಸಂಘಟನೆಗಳು ಆರೋಪಿಸುತ್ತಿವೆ. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್ ಅಭಿಯಾನ: ʻಪಠಾಣ್ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?