ಮುಂಬೈ: ಶಾರುಖ್ ಖಾನ್ ನಟನೆಯ ʼಪಠಾಣ್ʼ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿ ತಾರೆಗಳಿಂದ ಹಿಡಿದು ಅಭಿಮಾನಿ ಬಳಗದ ಪ್ರತಿಯೊಬ್ಬರೂ ಸಿನಿಮಾದ ಬಗ್ಗೆ ಮೆಚ್ಚುಗೆ ಹೊರಹಾಕಲಾರಂಭಿಸಿದ್ದಾರೆ. ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಪಠಾಣ್ ಸಿನಿಮಾ ವೀಕ್ಷಿಸಿದ್ದು, ʼಬ್ಯಾನ್ ಬಾಲಿವುಡ್ʼ ಎನ್ನುತ್ತಿದ್ದವರನ್ನು ಮಾತಿನಿಂದ ಕೆಣಕಿದ್ದಾರೆ.
ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ʼಪಠಾಣ್ʼ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಅಲಿಯಾ, “ಏಕೆಂದರೆ ಪ್ರೀತಿ ಯಾವಾಗಲೂ ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ “ವಾಟ್ ಎ ಬ್ಲಾಸ್ಟ್!” ಎಂದೂ ಸಹ ಬರೆದಿದ್ದಾರೆ. ಬಾಲಿವುಡ್ ನಿಷೇಧಿಸಬೇಕು ಎನ್ನುವ ಸ್ಪರ್ಧೆಯ ಮುಂದೆ ಬಾಲಿವುಡ್ನ ಪ್ರೀತಿಯೇ ಗೆದ್ದಿದೆ ಎಂಬರ್ಥದಲ್ಲಿ ಅವರು ಈ ಸ್ಟೋರಿ ಹಾಕಿದ್ದಾರೆ.
ಅಲಿಯಾ ಅವರು ಶುಕ್ರವಾರ ತಾಯಿ ಸೋನಿ ರಾಜ್ದಾನ್ ಮತ್ತು ಸಹೋದರಿ ಶಹೀನಾ ಭಟ್ ಅವರೊಂದಿಗೆ ಪಠಾಣ್ ಸಿನಿಮಾ ವೀಕ್ಷಿಸಿದ್ದಾರೆ. ಕುಟುಂಬದೊಂದಿಗೆ ಪಾಪ್ಕಾರ್ನ್ ಹಿಡಿದುಕೊಂಡು ಕುಳಿತಿರುವ ಫೋಟೋವನ್ನೂ ಹಂಚಿಕೊಂಡಿರುವ ಅವರು “ಅಮ್ಮ, ಅಕ್ಕನೊಂದಿಗೆ ಪಠಾಣ್ ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದರು.
ಪಠಾಣ್ ಸಿನಿಮಾ ಬುಧವಾರ ಬಿಡುಗಡೆಯಾಗಿದ್ದು, ಅಂದೇ ವಿಶ್ವಾದ್ಯಂತ ಒಟ್ಟು 106 ಕೋಟಿ ರೂ. ಗಳಿಸಿದೆ. ಈವರೆಗೆ ಬಿಡುಗಡೆಯಾದ ಮೊದಲನೇ ದಿನವೇ ಅತಿ ಹೆಚ್ಚು ಸಂಪಾದನೆ ಮಾಡಿರುವ ಸಿನಿಮಾ ಎನ್ನುವ ದಾಖಲೆ ಬರೆದಿದೆ.