ಬೆಂಗಳೂರು: ಶಾರುಖ್ ಅಭಿನಯದ ʻಪಠಾಣ್ʼ ಸಿನಿಮಾ (Pathaan Movie) ಭಾರತದ ಬಾಕ್ಸ್ ಆಫೀಸ್ನಲ್ಲಿ 500 ಕೋಟಿರೂ. ಗಳಿಸಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯ ಮುಂಚೆ ʻಬೇಷರಮ್ ರಂಗ್ʼ ಹಾಡು ವಿವಾದಕ್ಕೆ ಗುರಿಯಾಗಿತ್ತು. ದೀಪಿಕಾ ಪಡುಕೋಣೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕೇಸರಿ ಬಿಕಿನಿ ಧರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಗೀತೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಕೆಲವರು ಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ಈ ಕೇಸ್ನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ಗೆ ಜಯ ಸಿಕ್ಕಿದೆ.
ಸೆನ್ಸಾರ್ ಪ್ರಮಾಣ ಪತ್ರ ಇಲ್ಲದೇ ಪಠಾಣ್ (Pathan) ಚಿತ್ರದ ಬೇಷರಮ್ ಹಾಡು ಮತ್ತು ಟೀಸರ್ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಅವುಗಳ ಪ್ರಸಾರ ನಿರ್ಬಂಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಹಾರಾಷ್ಟ್ರ ಸಿಟಿ ಸಿವಿಲ್ ಕೋರ್ಟ್ ವಜಾ ಮಾಡಿದೆ.
ಪಠಾಣ್ ಚಿತ್ರದ ಹಾಡುಗಳನ್ನು U/A ಸರ್ಟಿಫಿಕೇಟ್ ಇಲ್ಲದೇ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಸಿನಿಮಾಟೋಗ್ರಫಿ ಕಾಯ್ದೆಯ 38ನೇ ನಿಯಮದ ಪ್ರಕಾರ ಅಂತಹ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ ಎಂದು ಅರ್ಜಿದಾರರ ಪರ ವಾದಿಸಲಾಯಿತು. ಪ್ರಸ್ತುತ ಇರುವ ನಿಯಮದ ಪ್ರಕಾರ, ಸಾರ್ವಜನಿಕವಾಗಿ ಚಿತ್ರಮಂದಿರ ಮುಂತಾದ ಸ್ಥಳಗಳಲ್ಲಿ ಪ್ರದರ್ಶನವಾಗುವ ಕಂಟೆಂಟ್ಗಳಿಗೆ ಮಾತ್ರ ಪ್ರಮಾಣಪತ್ರದ ಅಗತ್ಯ ಇದೆ. ಇಂಟರ್ನೆಟ್ನಲ್ಲಿ ಯೂಟ್ಯೂಬ್, ಒಟಿಟಿ ಮುಂತಾದ ಕಡೆಗಳಲ್ಲಿ ಪ್ರಸಾರ ಮಾಡಲು ಸೆನ್ಸಾರ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ‘ಯಶ್ ರಾಜ್ ಫಿಲ್ಮ್ಸ್’ ವಾದ ಮಂಡಿಸಿದೆ. ಇದನ್ನು ಆಧರಿಸಿ ಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ: Pathaan Movie : 1000 ಕೋಟಿ ರೂ. ಗಳಿಕೆಯತ್ತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ದಾಪುಗಾಲು!
ಪಠಾಣ್ ಈಗ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಹೊರಹೊಮ್ಮಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ರಾ ಏಜೆಂಟ್ ಆಗಿ ನಟಿಸಿದ್ದಾರೆ.