ಅಹಮದಾಬಾದ್: ಶಾರುಖ್ ಖಾನ್ ಅವರ ʼಪಠಾಣ್ʼ (Pathaan Movie) ಸಿನಿಮಾದ ʼಬೇಷರಮ್ ರಂಗ್ʼ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕನಿ ಧರಿಸಿದ್ದು, ಹಿಂದೂ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ದೃಶ್ಯಗಳನ್ನು ತೆಗೆಯದೇ ಹೋದರೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೆಲವು ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಆದರೆ ಇದೀಗ ಗುಜರಾತ್‌ನಲ್ಲಿ ಸಿನಿಮಾದ ಪ್ರದರ್ಶನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯನ್ನು ಪಡಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹೇಳಿದೆ.
ಇದನ್ನೂ ಓದಿ: Pathaan Movie : ಮುಂಗಡ ಟಿಕೆಟ್‌ಗಳ ಮಾರಾಟದಲ್ಲಿ 20 ಕೋಟಿ ರೂ. ದಾಟಿದ ʻಪಠಾಣ್ʼ
ಸಿನಿಮಾ ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿನ ಕೆಲವು ಅಶ್ಲೀಲ ದೃಶ್ಯಗಳು ಹಾಗೂ ಪದಗಳನ್ನು ತೆಗೆದುಹಾಕಿಸಿದೆ. ನಮ್ಮ ಬಜರಂಗದಳದ ಹೋರಾಟದ ನಂತರವೇ ಈ ಕ್ರಮ ನಡೆದಿದೆ. ಇದು ಒಂದು ರೀತಿಯಲ್ಲಿ ನಮಗೆ ಸಿಕ್ಕ ಜಯವಾಗಿದೆ. ಹಾಗಾಗಿ ನಾವು ಸಿನಿಮಾವನ್ನು ಪ್ರದರ್ಶನ ಮಾಡುವುದಕ್ಕೆ ಅನುಮತಿ ನೀಡಿದ್ದೇವೆ ಎಂದು ಗುಜರಾತ್ ವಿಶ್ವ ಹಿಂದೂ ಪರಿಷತ್‌ನ ಅಶೋಕ್ ರಾವಲ್ ತಿಳಿಸಿದ್ದಾರೆ.
ಪಠಾಣ್ ಸಿನಿಮಾದಲ್ಲಿ 10ಕ್ಕೂ ಅಧಿಕ ದೃಶ್ಯಗಳನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಹಾಗಿದ್ದರೂ ದೀಪಿಕಾ ಅವರ ಕೇಸರಿ ಬಿಕನಿ ದೃಶ್ಯ ಹಾಡಿನಲ್ಲಿ ಇರಲಿದೆ. ಅದಕ್ಕೆ ಸೆನ್ಸಾರ್ ಮಂಡಳಿಯಿಂದ ಸೂಚನೆ ಬಂದಿಲ್ಲ.
ಇದನ್ನೂ ಓದಿ: Pathan Movie: ಇಲ್ಲಿವೆ ಪಠಾಣ್ ಡಿಫರೆಂಟ್ ಲುಕ್ಸ್!
ಭಾನುವಾರದಂದು ಗುಜರಾತ್‌ನ ಸೂರತ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಸಿನಿಮಾ ಥಿಯೇಟರ್‌ಗೆ ನುಗ್ಗಿ ಅಲ್ಲಿದ್ದ ಪಠಾಣ್ ಸಿನಿಮಾದ ಪೋಸ್ಟರ್‌ಗಳನ್ನು ಹರಿದುಹಾಕಿದ್ದರು. ಆ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದರು.