ಬೆಂಗಳೂರು: ನಟ ಸಿಂಬು ಅವರ ‘ಪತ್ತು ತಲ‘ (Pathu Thala) ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಲಿದೆ. ಒಬೆಲಿ ಎನ್ ಕೃಷ್ಣ ನಿರ್ದೇಶನದ ಈ ಸಿನಿಮಾ ಏಪ್ರಿಲ್ 27ರಂದು ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ. ನಟ ಗೌತಮ್ ಕಾರ್ತಿಕ್ ಸಹ ನಟಿಸಿದ್ದು, ‘ಪತ್ತು ತಲ’ ಕನ್ನಡದ ಹಿಟ್ ಚಿತ್ರ ‘ಮಫ್ತಿ’ಯ ತಮಿಳು ರಿಮೇಕ್. ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಮಫ್ತಿ ಚಿತ್ರ ಬಂದು ಈಗ 6 ವರ್ಷಗಳೇ ಕಳೆದಿವೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಪಾತ್ರಗಳು ಈ ಚಿತ್ರದಲ್ಲಿ ವಿಭಿನ್ನವಾಗಿದ್ದವು.
‘ಭೈರತಿ ರಣಗಲ್’ ಆಗಿ ಸಿಂಬು ಉದ್ದನೆಯ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಮುರುಳಿ ಪಾತ್ರವನ್ನು ಗೌತಮ್ ಕಾರ್ತಿಕ್ ನಿಭಾಯಿಸಿದ್ದಾರೆ. ಕನ್ನಡದಲ್ಲಿ ದೇವರಾಜ್ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಗೌತಮ್ ವಾಸುದೇವನ್ ಮೆನನ್ ಮಾಡಿದ್ದಾರೆ. ಎ. ಆರ್ ರೆಹಮಾನ್ ಮ್ಯೂಸಿಕ್, ಫಾರೂಕ್ ಭಾಷಾ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.
ʻಪತ್ತು ತಲʼ ರಿಮೇಕ್ ಆಗಿದ್ದರೂ ವಿಭಿನ್ನ ಚಿತ್ರ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ. ʻʻಸಿಂಬು ಮತ್ತು ಗೌತಮ್ ಕಾರ್ತಿಕ್ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಇದು ನಿರ್ದೇಶಕನಿಗೆ ಕೆಲಸವನ್ನು ಹೆಚ್ಚು ಸುಲಭಗೊಳಿಸಿದೆ. ಕೊನೆಯವರೆಗೂ ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ಪಾತ್ರಗಳಿವೆ” ಎಂದು ಕೃಷ್ಣ ಹೇಳಿದರು. ಈ ಚಿತ್ರದ ಕಥೆಯ ಕ್ರೆಡಿಟ್ ಅನ್ನು ಮೂಲ ಚಿತ್ರದ ನಿರ್ದೇಶಕ ನರ್ತನ್ ಅವರಿಗೆ ನೀಡಲಾಗಿದೆ. ಆದರೆ ಇಲ್ಲಿ ಚಿತ್ರಕಥೆ ಬದಲಾಗಿದೆ. ಕಲಾವಿದರು ಬದಲಾಗಿದ್ದಾರೆ.
ಇದನ್ನೂ ಓದಿ: Pathu Thala Teaser: ʻಮಫ್ತಿʼ ರಿಮೇಕ್ ‘ಪತ್ತು ತಲ’ ಟೀಸರ್ ರಿಲೀಸ್: ಹೇಗಿದೆ ಸಿಂಬು ರಗಡ್ ಲುಕ್?
ಇದೇ ಚಿತ್ರದಲ್ಲಿ ಅಭಿನಯಿಸಿದ್ದ ಸಿಂಗ ಪಾತ್ರಧಾರಿ ಮಧು ಗುರುಸ್ವಾಮಿ ಮಾತ್ರ ಇಲ್ಲಿದ್ದಾರೆ. ʻಪತ್ತು ತಲʼ ಅಂದ್ರೆ ಹತ್ತು ತಲೆ ಎಂದರ್ಥ. ಈ ಸಿನಿಮಾವನ್ನು ಜಯಂತಿಲಾಲ್ ಗಡ ಮತ್ತು ಕೆ ಇ ಜ್ಞಾನವೇಲ್ ರಾಜ ನಿರ್ಮಿಸಿದ್ದಾರೆ.