ಕನ್ನಡ ಸಿನಿಮಾ ಜಗತ್ತಿಗೆ ಬಗೆ ಬಗೆಯ ಚಿತ್ರಗಳನ್ನು ಉಡುಗೊರೆಯಾಗಿ ನೀಡಿ, “ಡೊಳ್ಳುʼ ಮೂಲಕ ಸಂಚಲನ ಮೂಡಿಸಿದ್ದ ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರತಿಷ್ಠಿತ ಅವಾರ್ಡ್ ಎಂಬ ಹೆಗ್ಗಳಿಕೆ ಪಡೆದಿರುವ ಆಸ್ಕರ್ ಆಯ್ಕೆ ಸಮಿತಿಯಲ್ಲಿ ‘ಜ್ಯೂರಿ’ಯಾಗಿ ಭಾಗವಹಿಸುವ ಮೂಲಕ ಪವನ್ ಒಡೆಯರ್ ಗಮನ ಸೆಳೆದಿದ್ದಾರೆ.
ಆಸ್ಕರ್ ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಲು ಭಾರತದಿಂದ ಸಿನಿಮಾಗಳನ್ನು ಆಯ್ಕೆ ಮಾಡಿ ಕಳಿಸಲಾಗುತ್ತದೆ. ಹೀಗೆ ಸಿನಿಮಾ ಆಯ್ಕೆಗಾಗಿ ಸಮಿತಿ ರಚಿಸಲಾಗುತ್ತದೆ. ಈ ಬಾರಿ ಕೂಡ ಆಸ್ಕರ್ ಅಖಾಡದಲ್ಲಿ ಸ್ಪರ್ಧಿಸಲು ಭಾರತದಿಂದ ಸಿನಿಮಾಗಳನ್ನು ಆಯ್ಕೆ ಮಾಡಲು ಸಮಿತಿ ರಚನೆ ಮಾಡಲಾಗಿತ್ತು. 17 ಜನರಿದ್ದ ಈ ಸಮಿತಿಯಲ್ಲಿ ಕನ್ನಡ ಚಿತ್ರರಂಗದ ವತಿಯಿಂದ ಭಾಗವಹಿಸಿದ್ದ ಏಕೈಕ ವ್ಯಕ್ತಿ ಪವನ್ ಒಡೆಯರ್. ಹಿಂದೆ ಕೂಡ ಹಲವರು ಚಂದನವನದಿಂದ ಆಸ್ಕರ್ ಸಮಿತಿಯಲ್ಲಿ ‘ಜ್ಯೂರಿ’ ಆಗಿ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಂಬಲು ಆಗಲಿಲ್ಲ
ಆಸ್ಕರ್ ಸಮಿತಿಯಲ್ಲಿ ‘ಜ್ಯೂರಿ’ ಆಗಿ ಭಾಗವಹಿಸಿರುವ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಪವನ್ ಒಡೆಯರ್. ಆಸ್ಕರ್ ಕಮಿಟಿ ನನಗೆ ಕರೆ ಮಾಡುತ್ತೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಹೀಗಾಗಿ ಕರೆ ಬಂದಾಗ ಮೊದಲು ನಂಬಲು ಸಾಧ್ಯವಾಗಲಿಲ್ಲ. ಸಿನಿಮಾ ಕ್ಷೇತ್ರದಲ್ಲಿ ನನ್ನ ಕೆಲಸ ಗುರುತಿಸಿ ‘ಜ್ಯೂರಿ’ ಆಗಿ ಆಯ್ಕೆ ಮಾಡಿರುವುದು ಸಾಕಷ್ಟು ತೃಪ್ತಿ ತಂದಿದೆ ಎಂದಿದ್ದಾರೆ ಪವನ್ ಒಡೆಯರ್.
ಅಲ್ಲದೆ ‘ಡೊಳ್ಳು’ ಸಿನಿಮಾ ತಮಗೆ ಈ ಅವಕಾಶ ಒದಗಿಸಿಕೊಟ್ಟಿರುವ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಈ ಬಾರಿ ಆಸ್ಕರ್ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಪ್ರಶಸ್ತಿ ಯಾರಿಗೆ ಒಲಿಯಲಿದೆ ಎಂಬ ಲೆಕ್ಕಾಚಾರ ಜೋರಾಗಿದೆ. ಆದರೆ ಕನ್ನಡ ಸಿನಿಮಾ ಆಯ್ಕೆಯಾಗದ ಕುರಿತು ಪವನ್ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿ, ಬೆಂಗಾಲಿ, ತೆಲುಗು, ತಮಿಳು, ಗುಜರಾತಿ ಮತ್ತು ಮಲಯಾಳಂ ಭಾಷೆಯಿಂದ ಹಲವು ಸಿನಿಮಾಗಳು ಆಸ್ಕರ್ಗೆ ಆಯ್ಕೆಯಾಗಿದ್ದವು.
ಒಟ್ಟಾರೆ ಸ್ಯಾಂಡಲ್ವುಡ್ ಮಿಂಚು ದೇಶಾದ್ಯಂತ ಸಂಚಲ ಸೃಷ್ಟಿಸಿದೆ. ಒಂದಾದ ಮೇಲೊಂದು ಸಿನಿಮಾ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರುತ್ತಿದೆ. ಈ ಖುಷಿ ಚಿತ್ರರಂಗದ ಹುರುಪನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಪವನ್ ಒಡೆಯರ್ ಆಸ್ಕರ್ ಸಮಿತಿಯ ‘ಜ್ಯೂರಿ’ ಆಗಿ ಭಾಗವಹಿಸಿರುವ ಸಂಗತಿ ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಖುಷಿ ತಂದಿದೆ.
ಇದನ್ನೂ ಓದಿ: Avatar Re Release | ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್ -1’