ಬೆಂಗಳೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Naresh) ನಟಿಸಿರುವ ʻಮತ್ತೆ ಮದುವೆʼ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ತಮ್ಮ ನಿಜ ಜೀವನದಲ್ಲಿ ನಡೆದ ನಾನಾ ವಿಷಯಗಳನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಈ ಬಗ್ಗೆ ನರೇಶ್ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದು ಹೀಗೆ.
ʻʻರಿಯಲ್ ಲೈಫ್ ಕಥೆಯೇ ಎನ್ನುವುದು ಸಿನಿಮಾ ನೋಡಿದಾಗಲೇ ಗೊತ್ತಾಗುತ್ತದೆ. ಈಗ ಹೇಳಿದರೆ ಮಜಾ ಇರೋದಿಲ್ಲ. ಹಾಗಾಗಿ ಕಥೆಯನ್ನು ಬಹಿರಂಗಪಡಿಸಲು ಈಗ ಸಾಧ್ಯವಿಲ್ಲ. ಇದೊಂದು ವಿಶಿಷ್ಟ ಸಿನಿಮಾ ಎಂದು ಹೇಳಬಹುದು.” ಇದು ಬಯೋಪಿಕ್ ಅಲ್ಲ. ಇದೊಂದು ಮನರಂಜನೆ ಸಿನಿಮಾ” ಎಂದು ಸ್ಪಷ್ಟಪಡಿಸಿದ್ದಾರೆ.
ನಿಜವಾಗಿಯೂ ಪವಿತ್ರಾ ಅವರನ್ನು ನರೇಶ್ ಮದುವೆ ಆದ್ರಾ?
ನರೇಶ್ ಈ ಬಗ್ಗೆ ಮಾತನಾಡಿ, ʻಕೆಲವರು ತಾಳಿ ಕಟ್ಟಿ, ಉಂಗುರು ಬದಲಾಯಿಸಿಕೊಂಡು, ಕೆಲವರು ಧರ್ಮ ಬದಲಾಯಿಸಿಕೊಂಡು ಮದುವೆಯಾಗುತ್ತಾರೆ. ನನ್ನ ದೃಷ್ಟಿಯಲ್ಲಿ ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ. ನಮ್ಮಿಬ್ಬರ ಮನಸ್ಸು ಸಂದಿಸಿವೆʼʼ ಎಂದು ಕಾನೂನು ಬದ್ಧವಾಗಿ ತಾವು ಮದುವೆಯಾಗಿಲ್ಲ. ಆದರೆ ಮಾನಸಿಕವಾಗಿ ಮದುವೆಯಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
15 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ತಯಾರಿ
ನರೇಶ್ ಅವರ ಮೂರನೇ ಪತ್ನಿ ವಿಚ್ಛೇದನ ನೀಡದೇ ಇರುವ ಕಾರಣ ನರೇಶ್ ಹಾಗೂ ಪವಿತ್ರಾ ಇನ್ನು ಮದುವೆ ಆಗಿಲ್ಲ. ನರೇಶ್ ಹಾಗೂ ರಮ್ಯಾ ನಡುವೆ ಜಟಾಪಟಿ ನಡೆಯುತ್ತಿದೆ. ಇದೇ ಕಾರಣಕ್ಕೆ ಮೂರನೇ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಈ ಸಿನಿಮಾ ನಿರ್ಮಿಸಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ನರೇಶ್ ಮಾತನಾಡಿ ʻʻಸೇಡು ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶ ಇದ್ದಿದ್ದರೆ, ಪೊಲೀಸರ ಬಳಿ ಹೋಗಬಹುದಿತ್ತು. ಅಥವಾ ನ್ಯಾಯಾಲಯದ ಮೆಟ್ಟಿಲೇರಬಹುದಿತ್ತು. ಸಿನಿಮಾದಿಂದ ಸೇಡು ತೀರಿಸಿಕೊಳ್ಳಲು ಸಾಧ್ಯವೆ? 15 ಕೋಟಿ ರೂ. ಖರ್ಚು ಮಾಡಿ ಸೇಡು ತೀರಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಇದು ಮನರಂಜನಾ ಸಿನಿಮಾʼʼಎಂದರು.
ಇದನ್ನೂ ಓದಿ: Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್ ಔಟ್!
ಮೇ 26ಕ್ಕೆ ಮತ್ತೆ ಮದುವೆ ತೆರೆಗೆ
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯಾ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದೆ. ಮೇ 26ಕ್ಕೆ ಬೆಳ್ಳಿಪರದೆಗೆ ಎಂಟ್ರಿ ಕೊಡಲಿದೆ.