ಬೆಂಗಳೂರು: ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ (Pavitra Naresh) ನಟಿಸಿರುವ ʻಮತ್ತೆ ಮದುವೆʼ ಸಿನಿಮಾ ಮೇ 26ರಂದು ತೆರೆ ಕಾಣುತ್ತಿದೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ತಮ್ಮ ಸಂಬಂಧದ ಕುರಿತು ಮನಬಿಚ್ಚಿ ಮಾತನಾಡಿದರು. ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್‌ಶಿಪ್ ಮದುವೆಗೆ ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೇನೆ ಎಂದು ತಿಳಿಯಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದರು.
ʻʻನಮ್ಮ ಹೃದಯಗಳ ಮಧ್ಯೆ ಮದುವೆ ಆಗಿದೆ, ನಾವು ಖುಷಿಯಿಂದ ಇದ್ದೇವೆ. ತುಂಬಾ ಜನರು ನನಗೆ ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ. ಮದುವೆ ಅಂದರೆ ಏನು? ಉಂಗುರು ಬದಲಾಯಿಸಿಕೊಳ್ಳುವುದಾ ಅಥವಾ ತಾಳಿ ಕಟ್ಟುವುದಾ? ಇದೆಲ್ಲವೂ ಸಂಪ್ರದಾಯವಷ್ಟೇ. ಒಟ್ಟಿಗೆ ಖುಷಿಯಾಗಿ ಇರುವುದೇ ಮದುವೆ. ನಾವಿಬ್ಬರೂ ಆ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇಬ್ಬರೂ ನೆಮ್ಮದಿಯಾಗಿ ಇದ್ದೇವೆ’ʼ ಎಂದರು.
ಇದನ್ನೂ ಓದಿ: Pavitra Naresh: ನರೇಶ್ ನಿಜವಾಗಿಯೂ ಪವಿತ್ರಾರನ್ನು ಮದುವೆ ಆದ್ರಾ? ಸಿನಿಮಾಗೆ 15 ಕೋಟಿ ರೂ. ಖರ್ಚು ಮಾಡಿದ್ಯಾಕೆ?
ಮದುವೆಯ ಕುರಿತಾಗಿಯೂ ಮಾತನಾಡಿದ ಅವರು, ‘ಬಹುಪತ್ನಿತ್ವ ತಪ್ಪು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಬಲವಂತವಾಗಿ ಯಾರೊಂದಿಗೂ ಬದುಕುವುದಕ್ಕೆ ಆಗುವುದಿಲ್ಲ. ಸಮಾಜಕ್ಕೆ ಹೆದರಿ ತುಂಬಾ ಜನ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಸುಖವಾಗಿ ಇಲ್ಲ. ಕಿರುಕುಳದ ನಡುವೆಯೂ ಬದುಕು ನಡೆಸುವುದು ನನ್ನ ಮಟ್ಟಿಗೆ ತಪ್ಪು’ ಎಂದರು ನರೇಶ್.
ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನರೇಶ್ ನಿರ್ಮಾಣ ಮಾಡಿರುವ ಮತ್ತೆ ಮದುವೆ ಚಿತ್ರಕ್ಕೆ ಎಂ. ಎಸ್. ರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯಾ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಇದನ್ನೂ ಓದಿ; Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್ ಔಟ್!
ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಮತ್ತೆ ಮದುವೆ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದೆ.
ಸಿನಿಮಾದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ