ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಬೆನ್ನಲ್ಲೆ, ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಕೂಡ ನಡೆಸಬೇಕೆಂದು ಮತ್ತು ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ನಿರ್ಮಾಪಕ ಕೃಷ್ಣೇಗೌಡ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ.
ಜುಲೈ 31ರಂದು ನಡೆಯಬೇಕಿದ್ದ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಮುಂದೂಡಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಚುನಾವಣೆ ಆಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ವಿತರಕ ಮಾರ್ಕ್ಸ್ ಸುರೇಶ್ ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಚುನಾವಣೆಗೆ ಸ್ಥಳ ನಿಗದಿ ಹಾಗೂ ವಾರ್ಷಿಕ ವರದಿ ತಯಾರಾಗಬೇಕಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | ಚಲನಚಿತ್ರ ವಾಣಿಜ್ಯ ಮಂಡಳಿಯ ನಾಲ್ಕು ದಶಕಗಳ ಮಹತ್ವದ ದಾಖಲೆ ಗುಜರಿ ಪಾಲು!
ʻʻಚುನಾವಣೆ ಮಾಡಲು ನಿರ್ಮಾಪಕ ಸಂಘದಲ್ಲಿ ಹಣವಿಲ್ಲ. ಹಾಗೂ ಇತ್ತೀಚೆಗೆ ನಿರ್ಮಾಪಕರ ಸಂಘದಲ್ಲಿ ಅವ್ಯವಹಾರಗಳು ಆಗುತ್ತಿವೆʼʼ ಎಂದು ನಿರ್ಮಾಪಕ ಕೃಷ್ಣೇಗೌಡ ಅವರು ಆರೋಪ ಮಾಡಿದ್ದರು. ಈ ಕುರಿತು ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಕೂಡ ನೀಡಿದ್ದರು. ದೂರನ್ನು ಪರಿಗಣಿಸಿದ ಡಿಆರ್ ಸಂಸ್ಥೆ ನಿರ್ಮಾಪಕರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ನಿರ್ಮಾಪಕರ ಸಂಘ ಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ನಿರ್ಮಾಪಕರ ಸಂಘದ ಪರವಾಗಿ ತೀರ್ಪು ನೀಡಿದ್ದು, ಚುನಾವಣೆ ಮಾಡುವುದಕ್ಕೆ ಅನುಮತಿ ನೀಡಿದೆ. ಆದರೆ ಈಗ ಆಡಳಿತಾಧಿಕಾರಿ ಕೈಗೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ʻʻಚುನಾವಣೆ ನಡೆಸಲು ಹಣವಿರಬೇಕು. ಸಂಘದಲ್ಲಿರುವ ಹಣವನ್ನು ಡ್ರಾ ಮಾಡಬೇಕು. ಡಿಆರ್ ಆಫೀಸ್‌ನಿಂದ ನೇಮಕಗೊಂಡಿದ್ದ ಆಡಳಿತಾಧಿಕಾರಿ ಸಹಿ ಬೇಕಾಗುತ್ತದೆ. ಆದರೆ ಅವರು ಕೈಗೆ ಸಿಗುತ್ತಿಲ್ಲ. ಕರೆ ಕೂಡ ಸ್ವೀಕರಿಸುತ್ತಿಲ್ಲ. ಹೀಗಾಗಿ ನಿರ್ಮಾಪಕರ ಸಂಘ ಮತ್ತೆ ಕೋರ್ಟ್ ಮೊರೆ ಹೋಗಿದೆ. ಕೋರ್ಟ್ ತೀರ್ಪು ಬರುವವರೆಗೆ ಎಲೆಕ್ಷನ್ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ