Site icon Vistara News

Kantara Movie | ಕಾಂತಾರ ಸಿನಿಮಾಗೆ ನಟ ಪ್ರಭಾಸ್‌ ಮೆಚ್ಚುಗೆ; ನಟ ಹೇಳಿದ್ದೇನು?

Kantara Movie

ಬೆಂಗಳೂರು: ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತರ ಸಿನಿಮಾ (Kantara Movie) ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ಸಿನಿ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಟಾಲಿವುಡ್‌ ನಟ ಪ್ರಭಾಸ್ ʻಸಿನಿಮಾದ ಕ್ಲೈಮ್ಯಾಕ್ಸ್‌ ಬಹಳ ಇಷ್ಟವಾಯಿತುʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ.

ನಟ ಪ್ರಭಾಸ್‌ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಅನಿಸಿಕೆಯನ್ನು ಹಾಕಿಕೊಂಡಿದ್ದು, ʻʻಕಾಂತಾರ ಸಿನಿಮಾ ನೋಡಿ ಎಂಜಾಯ್‌ ಮಾಡಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್. ಚಿತ್ರತಂಡಕ್ಕೆ ನನ್ನ ಶುಭಾಶಯಗಳು, ಸಿನಿಮಾಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆʼʼ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್ ಹಾಗೂ ಸಪ್ತಮಿ ಗೌಡ ಅವರಿಗೆ ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ | Kantara Review | ದಟ್ಟ ಕಾಂತಾರದಲ್ಲಿ ಭೂತ-ಭವಿಷ್ಯಗಳ ಥ್ರಿಲ್ಲಿಂಗ್‌ ಮುಖಾಮುಖಿ

ನಟಿ, ನಿರ್ಮಾಪಕಿ ರಮ್ಯಾ ಸಹ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ʻʻಕೆಲವು ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಪದಗಳೇ ಸಿಗುವುದಿಲ್ಲ. ಕೆಲವು ಸಿನಿಮಾಗಳು ಮಾತನಾಡಿಸುವುದಿಲ್ಲ. ಆದರೆ ಒಳ್ಳೆಯ ಅನುಭವ ನೀಡುತ್ತದೆ. ಅಂತಹ ಚಿತ್ರಗಳ ಸಾಲಿಗೆ ಕಾಂತಾರ ಸೇರುತ್ತದೆ. ಸಿನಿಮಾ ನೋಡಿದ ನಂತರವೂ ಇನ್ನೂ ನಾನು ಕಾಂತಾರದಲ್ಲೇ ಇದ್ದೇನೆʼʼ ಎಂದು ರಮ್ಯಾ ಬರೆದುಕೊಂಡಿದ್ದರು.

ಕಾಂತಾರ ಮೊದಲ ದಿನ 6 ರಿಂದ 7 ಕೋಟಿ ರೂ. ಕಲೆಕ್ಷನ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಈ ಮೂಲಕ ರಿಷಬ್ ಶೆಟ್ಟಿಯ ಎಲ್ಲ ಸಿನಿಮಾಗಳಿಗಿಂತ ಈ ಸಿನಿಮಾ ಮೊದಲ ದಿನದಲ್ಲೇ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಅಜನೀಶ್ ಬಿ. ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kantara movie | ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತಾರ ಶುಭಾರಂಭ

Exit mobile version