ಬೆಂಗಳೂರು: ಇಂಡಿಯನ್ ಮೈಕಲ್ ಜಾಕ್ಸನ್ ಎಂತಲೇ ಖ್ಯಾತಿ ಪಡೆದಿರುವ ನಿರ್ದೇಶಕ-ನೃತ್ಯ ಸಂಯೋಜಕ ಪ್ರಭು ದೇವ (Prabhu Deva) ಅವರನ್ನು ನೆನೆಪಿಸಿಕೊಂಡರೆ ತಕ್ಷಣ ನೆನಪಾಗುವುದು ಅವರ ಜಬರ್ದಸ್ತ್ ಡ್ಯಾನ್ಸ್. ಎಂತಹದ್ದೇ ಸ್ಟೆಪ್ಸ್ ಇರಲಿ ಲೀಲಾಜಾಲವಾಗಿ ನಿರ್ವಹಿಸುವ ಪ್ರಭು ದೇವ ಅವರ ಆಲ್ ಟೈಮ್ ಹಿಟ್ ಹಾಡು ʻಮುಕಾಬಲಾʼ ಡ್ಯಾನ್ಸ್ ನೀವೆಲ್ಲರೂ ನೋಡಿರುತ್ತೀರಿ. ಆದರೆ ಇದರ ಹಿಂದಿನ ನೋವಿನ ಕಥೆಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಪ್ರಭು ದೇವ. ಮುಕಾಬಲಾ ಚಿತ್ರೀಕರಣದ ಸಮಯದಲ್ಲಿ ಪ್ರಭು ದೇವ ಅವರು ಪಾದದ ನೋವಿನಿಂದ ಬಳಲುತ್ತಿದ್ದರು ಎಂದು ಅನೇಕರಿಗೆ ತಿಳಿದಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಪ್ರಭು ದೇವ ಅವರು “ಉರ್ವಶಿ ಊರ್ವಶಿ” ಮತ್ತು “ಮುಕಾಬಲಾ” ಹಾಡುಗಳ ನೃತ್ಯಕ್ಕೆ ಹೆಸರುವಾಸಿ. 1994ರ ಸಿನಿಮಾವಾದ ʻಕಾದಲನ್ʼ (Kadhalan) ಹಾಡು “ಮುಕಾಬಲಾ” ಚಿತ್ರೀಕರಣದ ಸಮಯದಲ್ಲಿ ಪ್ರಭು ದೇವ ಅವರು ಪಾದದ ನೋವಿನಿಂದ ಬಳಲುತ್ತಿದ್ದರು. ಸಂದರ್ಶನವೊಂದರಲ್ಲಿ ನಟ ಈ ಬಗ್ಗೆ ಹೇಳಿಕೊಂಡಿದ್ದಾರೆ. ಎಡ ಪಾದಕ್ಕೆ ಕ್ರೇಪ್ ಬ್ಯಾಂಡೇಜ್ ಅನ್ನು ಬಿಗಿಯಾಗಿ ಕಟ್ಟಿಕೊಂಡು ಹಾಡಿನ ಶೂಟಿಂಗ್ ಪೂರ್ಣಿಗೊಳಿಸಿರುವುದಾಗಿ ಪ್ರಭು ದೇವ ಹೇಳಿದ್ದಾರೆ.
ಈ ಬಗ್ಗೆ ನಟ ಮಾತನಾಡಿ ʻʻಮುಕಾಬಲಾ ಹಾಡಿನ ಚಿತ್ರಿಕರಣದ ಮೊದಲು, ಫೈಟ್ ಸೀಕ್ವೆನ್ಸ್ ಚಿತ್ರಿಕರಣ ಮಾಡಿದ್ದೆವು. ಆಗ ಚಿತ್ರೀಕರಣದಲ್ಲಿ ನಾನು ಪಾದ ಮುರಿತಕ್ಕೆ ಒಳಗಾದೆ. ನಡೆಯಲಿಕ್ಕೂ ಆಗದ ಸಂದರ್ಭ ಎದುರಿಸಿದ್ದೆ. ʻʻಎನ್ನವಲೆ” ಹಾಡಿನಲ್ಲಿ, ನಾನು ನಡೆಯಲೂ ಇಲ್ಲ. ಒಂದು ಸಣ್ಣ ಸೀಕ್ವೆನ್ಸ್‌ಗಾಗಿ ಮಾತ್ರ ನಡೆದಿದ್ದೇನೆ. “ಎನ್ನವೆಲೆ” ನಂತರ, “ಮುಕಾಬಲಾ” ಚಿತ್ರೀಕರಣ ಮಾಡಬೇಕಾಗಿತ್ತುʼʼ ಎಂದರು.
ಇದನ್ನೂ ಓದಿ: Prabhu Deva | ಪ್ರಭುದೇವ ಅಭಿನಯದ `Wolf’ ಚಿತ್ರದ ಚಿತ್ರೀಕರಣ ಮುಕ್ತಾಯ
ಮಾತು ಮುಂದುವರಿಸಿ ʻʻಮುಕಾಬಲಾ ಶೂಟಿಂಗ್ ಸಮಯದಲ್ಲಿ ಕೇವಲ ಬಲಗಾಲಿನಿಂದ ಮಾತ್ರ ಡ್ಯಾನ್ಸ್ ಮಾಡಿದ್ದೆ. ನನ್ನ ಪೂರ್ಣ ತೂಕ ಬಲಗಾಲಿನ ಮೇಲೆ ಇತ್ತು. ಎಡಗಾಲಿಗೆ ಕ್ರೇಪ್ ಬ್ಯಾಂಡೇಜ್ ಕಟ್ಟಿದ್ದೆ. ನಾನು ಬೇರೆ ಬೇರೆ ಗಾತ್ರದ ಶೂಗಳನ್ನು ಧರಿಸಿದ್ದೆ. ಒಂದು ಕಾಲಿಗೆ 9 ಸೈಜ್‌ನ ಶೋ ಧರಿಸಿದ್ದರೆ, ಇನ್ನೊಂದು ಕಾಲಿಗೆ 10 ಸೈಜ್‌ನ ಶೂ ಧರಿಸಿದ್ದೆ. ಪೂರ್ತಿ ಸಾಂಗ್ ಅನ್ನು ಒಂದೇ ಕಾಲಿನಿಂದ ನಿಭಾಯಿಸಿದ್ದೆ. ನೋವಿಗಿಂತ ಹೆಚ್ಚಾಗಿ ಕ್ರೇಪ್ ಬ್ಯಾಂಡೇಜ್ ಟೈಟ್ ಆಗಿ ಕಟ್ಟಿದ್ದರಿಂದ ಅದರ ನೋವೇ ನನಗೆ ಕಷ್ಟಕರವಾಗಿತ್ತುʼʼ ಎಂದರು.
ʻʻಡ್ಯಾನ್ಸ್ ಮಾಡುವಾಗ ಇದ್ಯಾವ ನೋವು ನನಗೆ ಮುಖ್ಯವಾಗಿರುತ್ತಿರಲಿಲ್ಲ. ಮನೆಗೆ ಬಂದ ನಂತರವೇ ಸಾಕಷ್ಟು ನೋವು ಅನುಭವಿಸುತ್ತಿದ್ದೆ.ʼʼಎಂದರು. ಸದ್ಯ ಪ್ರಭು ದೇವ ಅವರು ರಾಮ್ ಚರಣ್ ಜತೆಗಿನ RC15 ಸಿನಿಮಾ ತಯಾರಿಯಲ್ಲಿದ್ದಾರೆ. ಈಗಾಗಲೇ ರಾಮ್‌ಚರಣ್ ಅವರನ್ನು ಚಿತ್ರತಂಡ ಅದ್ಧೂರಿಯಾಗಿ ನಾಟು ನಾಟು ಸಿಗ್ನೇಚರ್ ಸ್ಟೆಪ್ಸ್ ಮೂಲಕ ಸ್ವಾಗತಿಸಿದೆ. ಈ ವಿಡಿಯೊ ಕೂಡ ವೈರಲ್ ಆಗಿದೆ.