ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಪ್ರಕಾಶ್ ಕೋಳೇರಿ (Prakash Koleri) ನಿಗೂಢವಾಗಿ ಮೃತಪಟ್ಟಿದ್ದಾರೆ. 65 ವರ್ಷದ ಪ್ರಕಾಶ್ ಅವರ ಶವ ವಯನಾಡು ಜಿಲ್ಲೆಯ ಅವರ ಮನೆಯೊಳಗೆ ಪತ್ತೆಯಾಗಿದೆ. ಎರಡು ದಿನಗಳಿಂದ ಪ್ರಕಾಶ್ ನಾಪತ್ತೆಯಾಗಿದ್ದರು. ಇದರಿಂದ ಸಂಶಯಗೊಂಡು ಅವರನ್ನು ಹುಡುಕಾಡಿದಾಗ ಮನೆಯೊಳಗೆ ಶವ ಪತ್ತೆಯಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಪ್ರಕಾಶ್ ತಮ್ಮ ಮನೆಯಲ್ಲಿ ಕೆಲವು ಸಮಯಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
1987ರಲ್ಲಿ ತೆರೆಕಂಡ ʼಮಿಜಿಯಿತ್ತಲಿಲ್ ಕಣ್ಣೀರುಮಾಯಿʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಪ್ರಕಾಶ್ ಚಿತ್ರರಂಗ ಪ್ರವೇಶಿಸಿದ್ದರು. ʼಅವನ್ ಅನಂತಪಧ್ಮನಾಭನ್ʼ, ʼವರುಂ ವರಾದಿರಿಕ್ಕಿಲ್ಲʼ, ʼಪಾಟು ಪುಸ್ತಕಂʼ ಮುಂತಾದವು ಪ್ರಕಾಶ್ ನಿರ್ದೇಶನದಲ್ಲಿ ಬಿಡುಗಡೆಯಾದ ಪ್ರಸಿದ್ಧ ಮಲಯಾಳಂ ಚಿತ್ರಗಳು. ಪ್ರಕಾಶ್ ನಿರ್ದೇಶನದ ಕೊನೆಯ ಚಿತ್ರ ʼಪಾಟು ಪುಸ್ತಕಂʼ 2013ರಲ್ಲಿ ತೆರೆಕಂಡಿತ್ತು. ಅದಾದ ಬಳಿಕ ಅವರು ನಿರ್ದೇಶನಕ್ಕೆ ಇಳಿದಿರಲಿಲ್ಲ. ನಿರ್ದೇಶನದ ಹೊರತಾಗಿ ಅವರು ಕೆಲವು ಸಿನಿಮಾಗಳಿಗೆ ಚಿತ್ರಕಥೆಗಳನ್ನೂ ಬರೆದಿದ್ದಾರೆ.
ರಮೇಶ್ ಅರವಿಂದ್ ಚಿತ್ರಕ್ಕೆ ಆ್ಯಕ್ಷನ್ ಕಟ್
ವಿಶೇಷ ಎಂದರೆ ಕನ್ನಡ ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ ಏಕೈಕ ಮಲಯಾಳಂ ಚಿತ್ರ ʼಅವನ್ ಅನಂತಪಧ್ಮನಾಭನ್ʼ ಚಿತ್ರವನ್ನು ಪ್ರಕಾಶ್ ನಿರ್ದೇಶಿಸಿದ್ದರು. 1993ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಸುಧಾ ಚಂದ್ರನ್, ರಾಜನ್ ಪಿ. ದೇವ್, ಕಾವೇರಿ, ಟಿ.ಪಿ.ಮಾಧವನ್, ಸುಕುಮಾರಿ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: Director Manikandan: ನಿರ್ದೇಶಕನ ಮನೆಯಲ್ಲಿ ಎಲ್ಲ ಕದ್ದು, ರಾಷ್ಟ್ರ ಪ್ರಶಸ್ತಿ ಪದಕ ಮಾತ್ರ ವಾಪಸ್ ಕೊಟ್ಟರು!
ಸದ್ಯ ಪ್ರಕಾಶ್ ಕೋಳೇರಿ ಅವರ ಸಾವಿನ ಬಗ್ಗೆ ಅನುಮಾನಗಳು ಎದ್ದಿವೆ. ʼʼಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಾವಿಗೆ ಕಾರಣ ಏನು ಎನ್ನುವುದನ್ನು ಶೀಘ್ರದಲ್ಲಿಯೇ ಬಹುರಂಗ ಪಡಿಸುತ್ತೇವೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ