ಬೆಂಗಳೂರು: ಬಹುಭಾಷಾ ನಟ ಕಿಶೋರ್ (Actor Kishore) ಸಿನಿಮಾಗಳ ಜತೆ ಜತೆಗೆ ಮೋದಿ ಬಗ್ಗೆ ತಮ್ಮ ಕಮೆಂಟ್‌ಗಳ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಇದೀಗ ರಾಮ ಮಂದಿರದ (Ram Mandir) ಕನಸು ನನಸಾಗಿದೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಇದರೊಂದಿಗೆ ಕೋಟ್ಯಂತರ ರಾಮಭಕ್ತರ ಕನಸು ಸಾಕಾರಗೊಂಡಿದೆ. ಇದರ ಬೆನ್ನಲ್ಲೇ ಇದೀಗ ನಟ ಕಿಶೋರ್ ಅವರ ಪೋಸ್ಟ್ ವೈರಲ್ ಆಗಿದೆ.
ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ ಎಂದು ಈ ಹಿಂದೆ ಕಿಶೋರ್ ಅವರು ಪೋಸ್ಟ್ ಮಾಡಿ ಸಖತ್ ಚರ್ಚೆಯಲ್ಲಿದ್ದರು. ಪ್ರಾಣ ಪ್ರತಿಷ್ಠಾಪನೆ ದಿನವೇ ಇದೀಗ ಅವರು ಬಸವಣ್ಣ ಅವರ ವಚನವನ್ನು ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ್ ಹೊರ ಹಾಕಿ ʻ ಈ ನಾಸ್ತಿಕವಾದವನ್ನು ಇತರ ಧರ್ಮದ ಪ್ರಾರ್ಥನಾ ಕೇಂದ್ರಗಳ ಉದ್ಘಾಟನೆ ದಿನ ಬಳಸಿʼʼ ಎಂದು ಕಮೆಂಟ್ ಮಾಡಿದ್ದಾರೆ.
ಕಿಶೋರ್ ಸೋಷಿಯಲ್ ಮೀಡಿಯಾದಲ್ಲಿ ʻʻಉಳ್ಳವರು ಶಿವಾಲಯವ ಮಾಡುವರು !
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!ʼʼ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನು ಇಂಗ್ಲೀಷ್‌ನಲ್ಲಿಯೂ ಭಾಷಾಂತರ ಮಾಡಿದ್ದಾರೆ ಕಿಶೋರ್. ಇದಕ್ಕೆ ನೆಟ್ಟಿಗರು ನಟನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ʻʻನಿಮ್ಮ ನಾಸ್ತಿಕವಾದ ನಿಮ್ಮ ಇಚ್ಛೆ. ಈ ನಾಸ್ತಿಕವಾದವನ್ನು ಇತರ ಧರ್ಮದ ಪ್ರಾರ್ಥನಾ ಕೇಂದ್ರಗಳ ಉದ್ಘಾಟನೆ ದಿನ ಬಳಸಿ. .ನಿಮ್ಮ ಮೆದುಳಿಗೂ ಸ್ವಲ್ಪ ವಿಶ್ರಾಂತಿ ಕೊಡಿ. ಬೇಗ ಹುಚ್ಚರಾಗ್ತಿರʼʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Ram Mandir : ಜಗತ್ತಿನಾದ್ಯಂತ ಸಂಭ್ರಮ; ಪಟಾಕಿ ಸಿಡಿಸಿ, ಸಿಹಿ ಹಂಚಿದ ರಾಮಭಕ್ತರು
ಈ ಮುಂಚೆ ಕಿಶೋರ್ ಅವರು ಅಸಲಿ ಹಿಂದೂ ವಿರೋಧಿ ಯಾರು ಎಂಬ ಪೋಸ್ಟ್ ಹಾಕಿ ಭಾರಿ ಚರ್ಚೆಗೆ ಗುರಿಯಾಗಿದ್ದರು.
ಕಿಶೋರ್ ತಮ್ಮ ಪೋಸ್ಟ್‌ನಲ್ಲಿ ʻʻಅಸಲಿ ಹಿಂದೂ ವಿರೋಧಿ ಯಾರು? ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ? ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ? ರಾಮ ಮಂದಿರದ ರಾಜಕೀಯಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ ನಿಜವಾದ ಹಿಂದೂ ವಿರೋಧಿಗಳು ಯಾರು? ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ಓಟು ಬಾಚಲು ನಿಂತಿರುವ ಧೂರ್ತರು, ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ?
ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿ ಬಿಡುವುದಿಲ್ಲವೇ??
ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ
ವ್ಯಾಪಾರದ ಸರಕು ಅಷ್ಟೇ.
ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ ಮಸೀದಿ ಚರ್ಚುಗಳಲ್ಲಲ್ಲ..
ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ..
ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ ?
ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ..ʼʼ ಎಂದು ಬರೆದುಕೊಂಡಿದ್ದರು.