ಬೆಂಗಳೂರು: ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿದ ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಇದೀಗ ಪಂಚಭಾಷಾ ತಾರೆಯಾಗಿದ್ದಾರೆ. 2010ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ʼಪೊರ್ಕಿʼ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು ಬಳಿಕ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಅಭಿನಯಿಸಿದರು. ಇದೀಗ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಮಾಲಿವುಡ್‌ನ ಜನಪ್ರಿಯ ನಾಯಕ ದಿಲೀಪ್ (Dileep) ಅಭಿನಯದ ʼತಂಕಮಣಿʼ (Thankamani) ಚಿತ್ರದಲ್ಲಿ ಪ್ರಣಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದು. ಇದೀಗ ಫಸ್ಟ್‌ಲುಕ್ ರಿಲೀಸ್ ಆಗಿದೆ.
ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಪ್ರಣಿತಾ
ಮೊದಲ ಬಾರಿ ಮಲಯಾಳಂ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರಣಿತಾಗೆ ಪವರ್ ಫುಲ್ ಪಾತ್ರವೇ ದೊರೆತಿದೆ. ಅರ್ಪಿತಾ ನಾಥ್ ಐಪಿಎಸ್ ಆಗಿ ಅವರು ತೆರೆ ಮೇಲೆ ಮಿಂಚಲಿದ್ದಾರೆ. ಖಾಕಿ ಯೂನಿಫಾರ್ಮ್ ತೊಟ್ಟಿರುವ ಪ್ರಣಿತಾ ಫಸ್ಟ್‌ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಥೆ ಏನು?
ʼತಂಕಮಣಿʼ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. 1986ರ ಅಕ್ಟೋಬರ್ 21ರಂದು ತಂಕಮಣಿ ಎನ್ನುವ ಊರಿನಲ್ಲಿ ಬಸ್ ಸೇವೆಯ ಬಗ್ಗೆ ವಾದ-ವಿವಾದ ನಡೆದು ಬಹು ದೊಡ್ಡ ಗಲಾಟೆಯೇ ಸಂಭವಿಸಿತ್ತು. ಇದು ಪೊಲೀಸ್ ಲಾಠಿ ಚಾರ್ಜ್ ಮತ್ತು ಗುಂಡಿನ ದಾಳಿಗೆ ದಾರಿ ಮಾಡಿಕೊಟ್ಟಿತ್ತು. ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಚಿತ್ರ ಮೂಡಿ ಬಂದಿದೆ. ರತೀಶ್ ರಘುನಂದನ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಈಗಾಗಲೇ ಕುತೂಹಲ ಮೂಡಿಸಿದೆ. ಇನ್ನೊಂದು ವಿಶೇಷ ಎಂದರೆ ಮಾಲಿವುಡ್‌ನ ಜನಪ್ರಿಯನ ನಟ ದಿಲೀಪ್ ಅಭಿನಯದ 148ನೇ ಚಿತ್ರವಿದು. ವೈವಿಧ್ಯಮಯ ಪಾತ್ರದ ಮೂಲಕ ಮಿಂಚುವ ದಿಲೀಪ್ ಅಭಿನಯದ ಚಿತ್ರ ಎಂದರೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡುತ್ತದೆ. ಹೀಗಾಗಿ ʼತಂಕಮಣಿʼ ಆರಂಭದಿಂದಲೇ ಸದ್ದು ಮಾಡಿತ್ತು.
ತಮ್ಮ ಫಸ್ಟ್‌ಲುಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪ್ರಣಿತಾ, ʼʼಜನಪ್ರಿಯ ನಾಯಕನ್ʼ ಖ್ಯಾತಿಯ ದಿಲೀಪ್ ಜತೆ ನನ್ನ ಮೊದಲ ಮಲಯಾಳಂ ಚಿತ್ರ. ಜತೆಗೆ ಇದು ಮಗು ಜನಿಸಿದ ಬಳಿಕ ನಾನು ಅಭಿನಯಿಸಿದ ಚೊಚ್ಚಲ ಚಿತ್ರವೂ ಹೌದು. ಎಂದಿನಂತೆ ನಿಮ್ಮ ಸಹಕಾರ ಇರಲಿʼʼ ಎಂದು ಬರೆದುಕೊಂಡಿದ್ದಾರೆ. ಮಲಯಾಳಂನ ಯುವ ನಟಿ ನೀತಾ ಪಿಳ್ಳೈ ಕೂಡ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಮನೋಜ್ ಕೆ. ಜಯನ್, ಸುದೇವ್ ನಾಯರ್, ಮಾಳವಿಕಾ ಮೆನನ್, ಅಜ್ಮಲ್ ಅಮೀರ್, ಸಿದ್ದಿಕ್, ಸಂಪತ್ ರಾಮ್, ಮೇಜರ್ ರವಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Pranitha Subhash: ಹಿಂದು ಆಚರಣೆಗಳು ಕೇವಲ ಪಿತೃಪ್ರಧಾನವಲ್ಲಎಂದ ನಟಿ ಪ್ರಣಿತಾ ಸುಭಾಷ್
2021ರಲ್ಲಿ ತೆರೆಕಂಡ ಬಾಲಿವುಡ್ ʼಹಂಗಾಮ 2ʼ ಮತ್ತು ʼಭುಜ್: ದಿ ಪ್ರೈಡ್ ಆಫ್ ಇಂಡಿಯಾʼ ಚಿತ್ರಗಳ ಬಳಿಕ ಪ್ರಣಿತಾ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರು ಬಳಿಕ ಮಗುವಿನ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ಸದ್ಯ ಅವರು ಬಣ್ಣದ ಲೋಕಕ್ಕೆ ಮರಳಿದ್ದು, ಫೋಟೊ ಶೂಟ್, ಜಾಹೀರಾತು ಮೂಲಕ ಸಕ್ರಿಯರಾಗಿದ್ದಾರೆ. ರಿಷಿ ಜತೆ ಪ್ರಣಿತಾ ಮೊದಲ ಬಾರಿ ಅಭಿನಯಿಸಿದ ʼರಾಮನ ಅವತಾರʼ ಕನ್ನಡ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಅವರು ಕನ್ನಡ ಮಾಧ್ಯಮ ಶಾಲೆಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜ ಸೇವೆಯಲ್ಲಿಯೂ ತೊಡಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ