Site icon Vistara News

Milana Nagaraj | ಅಂಡರ್‌ ವಾಟರ್‌ ಶೂಟಿಂಗ್‌ನಲ್ಲಿ ಪೃಥ್ವಿ ಅಂಬಾರ್‌-ಮಿಲನಾ ನಾಗರಾಜ್‌: `FOR REGN’ನಲ್ಲಿ “ಮೋಕೊ ಬೋಟ್”!

Milana Nagaraj (FOR REGN)

ಬೆಂಗಳೂರು : ʻಲವ್‌ ಮಾಕ್ಟೇಲ್ʼ ಖ್ಯಾತಿಯ ಮಿಲನಾ ನಾಗರಾಜ್‌ (Milana Nagaraj) ಹಾಗೂ ʻದಿಯಾʼ ಹೀರೊ ಪೃಥ್ವಿ ಅಂಬಾರ್‌ ನಟನೆಯ ಫಾರ್‌ ರಿಜಿಸ್ಟ್ರೇಷನ್‌ (For Regn) ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಇದರ ಬೆನ್ನಲೇ ಹಾಡೊಂದರ‌ ಮೂಲಕ ಚಿತ್ರೀಕರಣವನ್ನು ಮುಗಿಸಿದೆ ಚಿತ್ರತಂಡ. ಅಂಡರ್ ವಾಟರ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಹಾಡಿನ ಚಿತ್ರೀಕರಣಕ್ಕಾಗಿ “ಮೋಕೊ ಬೋಟ್” ಕ್ಯಾಮೆರಾ ಬಳಸಲಾಗಿದೆ.‌ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ಕ್ಯಾಮೆರಾ ಬಳಸಿದ್ದು ಎಂದಿದ್ದಾರೆ ನಿರ್ದೇಶಕ ನವೀನ್‌ ದ್ವಾರಕನಾಥ್‌.

ಈ ಹಿಂದೆ ಚಿತ್ರದ ಫಸ್ಟ್‌ ಲುಕ್‌ ಕೂಡ ಚಿತ್ರ ತಂಡ ರಿವೀಲ್‌ ಮಾಡಿತ್ತು. ಎರಡು ಮುಗ್ದ ಮನಸ್ಸುಗಳ ನಡುವಿನ ಹಾಸ್ಯಭರಿತವಾದ ರೊಮ್ಯಾಂಟಿಕ್‌ ಫ್ಯಾಮಿಲಿ ಡ್ರಾಮಾ ಚಿತ್ರ ಇದಾಗಿದ್ದು ಫೆಬ್ರವರಿ 10, 2023ರಂದು ತೆರೆ ಕಾಣುತ್ತಿದೆ. ಇದೀಗ ಹಾಡಿನ ಚಿತ್ರೀಕರಣದ ಫೋಟೊಗಳನ್ನು ಹಂಚಿಕೊಂಡಿರುವ ಚಿತ್ರತಂಡ, “ಮೋಕೊ ಬೋಟ್” ಕ್ಯಾಮೆರಾದ ಬಳಕೆ ಮಾಡಿರುವ ಕುರಿತು ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ | Kannada New Movie | ಪೃಥ್ವಿ ಅಂಬಾರ್‌-ಮಿಲನಾ ಅಭಿನಯದ `For Regn’ ರಿಲೀಸ್‌ ಡೇಟ್‌ ರಿವೀಲ್‌!

ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಈ ಹಾಡನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿರುವ ಈ ಹಾಡಿನಲ್ಲಿ ಮಿಂಚಿದ್ದಾರೆ ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್. ಈ ಹಿಂದೆ ಚಿತ್ರದ ಆಡಿಯೊ ಹಕ್ಕನ್ನು ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರಿ ಮೊತ್ತ ನೀಡಿ ಖರೀದಿಸಿತ್ತು. ಆರ್‌.ಕೆ. ಹರೀಶ್‌ ಸಂಗೀತ ಸಂಯೋಜಿಸಿರುವ ಆರು ಹಾಡಿಗಳಿಗೆ ಬಹದ್ದೂರ್‌ ಚೇತನ್‌, ಕವಿರಾಜ್‌ ಅರಸ್‌ ಹಾಗೂ ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ವಿಜಯ್‌ ಪ್ರಕಾಶ್‌, ಚಂದನ್‌ ಶೆಟ್ಟಿ, ವಾಸುಕಿ ವೈಭವ್‌ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಫಾರ್‌ ರಿಜಿಸ್ಟ್ರೇಷನ್‌ ಚಿತ್ರದ ತಾರಾಬಳಗದಲ್ಲಿ, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು, ಅರವಿಂದ್‌ ಬೋಳಾರ್‌ ಮುಂತಾದವರು ಇದ್ದಾರೆ.

ಸಿನಿಮಾ ಚಿತ್ರೀಕರಣ ಮಂಗಳೂರು, ಸಕಲೇಶಪುರ, ಉಡುಪಿ ಹಾಗೂ ಬೆಂಗಳೂರಿನಲ್ಲಿ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಿಶ್ಚಲ್‌ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಎನ್‌. ನವೀನ್‌ ರಾವ್‌ ಬಂಡವಾಳ ಹೂಡುತ್ತಿದ್ದಾರೆ. ಅಭಿಷೇಕ್ ಕಳತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮತ್ತು ಮನು ಶೆಡ್ಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ | Darling Krishna | ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್‌ ಅಭಿನಯದ ಪ್ರತ್ಯೇಕ ಚಿತ್ರಗಳು ಒಂದೇ ದಿನ ರಿಲೀಸ್‌!

Exit mobile version